ದಾಖಲೆ ತಿದ್ದುಪಡಿಗಾಗಿ 15 ವರ್ಷಗಳಿಂದ ಹಿರಿಯ ನಾಗರಿಕನ ಹೋರಾಟ

ಕನ್ನಡಪ್ರಭ ವಾರ್ತೆ ಕಾರವಾರ

ಅಧಿಕಾರಿಗಳ ತಪ್ಪು ಕಲ್ಪನೆಯಿಂದಾಗಿ ಪಹಣಿ ಪತ್ರಿಕೆಯಲ್ಲಿ ಜಮೀನಿನ ಸರ್ವೇ ಸಂಖ್ಯೆ ಅದಲುಬದಲಾಗಿ, ಕಳೆದ 15 ವರ್ಷಗಳಿಂದ ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಹಿರಿಯ ನಾಗರಿಕರೊಬ್ಬರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.ಹಾರವಾಡ ಗ್ರಾಮದ ನಿವಾಸಿ ಜ್ಞಾನೇಶ್ವರ ಸಕಾರಾಮ ಸಾಧಿಯೆ ಎಂಬುವವರು ಹಾರವಾಡ ಗ್ರಾಮದ ಸರ್ವೆ ನಂ. 334ಅ, ಹಿಸ್ಸಾ 40 (ಕ್ಷೇತ್ರಫಲ 0.8.0) ಜಮೀನಿನ ಮಾಲೀಕರಾಗಿದ್ದಾರೆ. 2012ರ ತನಕ ಇವರ ಪಹಣಿ ಪತ್ರಿಕೆಯಲ್ಲಿ ಸರ್ವೆ ಸಂಖ್ಯೆ ಸರಿಯಾಗಿಯೇ ದಾಖಲಾಗಿತ್ತು. ಆದರೆ, 2012-13ನೇ ಸಾಲಿನಲ್ಲಿ ಕುಮಟಾ ಸಹಾಯಕ ಆಯುಕ್ತರ ಆದೇಶದನ್ವಯ ಈ ಸರ್ವೇ ಸಂಖ್ಯೆಯನ್ನು ಸ.ನಂ. 334 ಹಿಸ್ಸಾ 30 ಎಂದು ತಿದ್ದುಪಡಿ ಮಾಡಲಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ಸ.ನಂ. 334 ಹಿಸ್ಸಾ 30 ಎಂಬ ಜಮೀನು ಅಸ್ತಿತ್ವದಲ್ಲೇ ಇಲ್ಲ ಎಂದು ಜ್ಞಾನೇಶ್ವರ ಅವರು ದೂರಿದ್ದಾರೆ.ಈ ತಪ್ಪು ತಿದ್ದುಪಡಿಯ ವಿರುದ್ಧ ಜ್ಞಾನೇಶ್ವರ ಅವರು ನಿರಂತರ ಹೋರಾಟ ನಡೆಸಿದ ಫಲವಾಗಿ, ಕುಮಟಾ ಸಹಾಯಕ ಆಯುಕ್ತರು ಕಳೆದ ಮಾರ್ಚ್ 17, 2025ರಂದು ಪುನಃ ಆದೇಶ ಹೊರಡಿಸಿ, ತಪ್ಪಾದ ಸರ್ವೇ ಸಂಖ್ಯೆಯನ್ನು ಮರು ತಿದ್ದುಪಡಿ ಮಾಡಿ ಸ.ನಂ. 334ಅ ಹಿಸ್ಸಾ 40 ಎಂದು ದಾಖಲಿಸುವಂತೆ ಅಂಕೋಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದರು. ಆದರೆ, ಎಸಿ ಅವರ ಆದೇಶವಾಗಿ ತಿಂಗಳುಗಳೇ ಕಳೆದರೂ ಇಂದಿನವರೆಗೂ ಪಹಣಿ ಉತಾರದಲ್ಲಿ ತಿದ್ದುಪಡಿಯಾಗಿಲ್ಲ ಎಂದು ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನನ್ನ ಗಮನಕ್ಕೆ ತರದೇ ಅಧಿಕಾರಿಗಳು ಮಾಡಿದ ಈ ಸಣ್ಣ ತಪ್ಪಿನಿಂದಾಗಿ ಕಳೆದ 12 ರಿಂದ 15 ವರ್ಷಗಳಿಂದ ನಾನು ವಿವಿಧ ಕಚೇರಿಗಳಿಗೆ ಅಲೆಯುತ್ತಿದ್ದೇನೆ. 69 ವರ್ಷ ವಯಸ್ಸಿನ ನನಗೆ ಅನವಶ್ಯಕವಾಗಿ ತೊಂದರೆ ಉಂಟುಮಾಡಲಾಗುತ್ತಿದೆ. ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ನನ್ನ ಸ್ವಂತ ಜಮೀನಿನ ದಾಖಲೆಗಳನ್ನು ಪಡೆಯಲು ಹರಸಾಹಸ ಪಡುವಂತಾಗಿದೆ ಎಂದು ಜ್ಞಾನೇಶ್ವರ ಮನವಿಯಲ್ಲಿ ವಿವರಿಸಿದ್ದಾರೆ.ತಕ್ಷಣವೇ ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಅಂಕೋಲಾ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವ ಮೂಲಕ ಪಹಣಿ ಪತ್ರಿಕೆಯಲ್ಲಿನ ಲೋಪದೋಷ ಸರಿಪಡಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.