ಸಾರಾಂಶ
ಯಾವುದೇ ಅರ್ಜಿಗೆ ನಿಗದಿತ ಕಾಲಮಿತಿ ಇರುವುದಿಲ್ಲ. ಹೀಗಾಗಿ ಅಧಿಕಾರಿಗಳು ಜನರು ಸಲ್ಲಿಸಿದ ಅರ್ಜಿಗಳಿಗೆ ಅಲ್ಪ ಕಾಲದಲ್ಲೇ ಪರಿಹಾರ ಒದಗಿಸಬೇಕು. ಅಲ್ಲದೇ ಅಧಿಕಾರಿಗಳು ಯಾವ ಕ್ರಮಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಬಹುದು.
ಕುಂದಗೋಳ:
ಜನರು ಸಮಸ್ಯೆಗಳ ಬಗ್ಗೆ ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಅವರು ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಅರ್ಜಿಗೆ ನಿಗದಿತ ಕಾಲಮಿತಿ ಇರುವುದಿಲ್ಲ. ಹೀಗಾಗಿ ಅಧಿಕಾರಿಗಳು ಜನರು ಸಲ್ಲಿಸಿದ ಅರ್ಜಿಗಳಿಗೆ ಅಲ್ಪ ಕಾಲದಲ್ಲೇ ಪರಿಹಾರ ಒದಗಿಸಬೇಕು. ಅಲ್ಲದೇ ಅಧಿಕಾರಿಗಳು ಯಾವ ಕ್ರಮಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಬಹುದು. ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಅಲ್ಲದೇ ಮಧ್ಯವರ್ತಿಗಳ ಹಾವಳಿಗೆ ಜನರು ಸಿಲುಕುವುದಿಲ್ಲ. ಜಿಲ್ಲಾಡಳಿತ ಜನರ ಮನೆ ಬಾಗಿಲಿಗೆ ಹೋಗಿ ಜನರ ಸಮಸ್ಯೆ ಪರಿಹರಿಸುತ್ತದೆ ಎಂದರು.ಜು. 15ರೊಳಗೆ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಇತ್ಯರ್ಥಪಡಿಸಬೇಕು. ಅರ್ಜಿಗಳನ್ನು ಗಣಕೀಕರಣ ಮಾಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿ, ಅರ್ಜಿಗಳಿಗೆ ಸ್ವೀಕೃತಿ ಪಡೆದುಕೊಳ್ಳಬೇಕು. ಜನರ ಸಮಸ್ಯೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಇತ್ಯರ್ಥಪಡಿಸಬೇಕು. ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಸವಾಯಿ ಗಂಧರ್ವ ಭವನದ ಆವರಣದಲ್ಲಿ ಸಸಿ ನೆಟ್ಟರು. ಈ ವೇಳೆ ಜಿಪಂ ಸಿಇಒ ಸ್ವರೂಪ ಟಿ.ಕೆ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಉಪವಿಭಾಧಿಕಾರಿ ಶಾಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ:
ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮುಂದೆ ತಂದರು. ಬೆಳೆ ಹಾನಿ ಪರಿಹಾರ, ಪಿಂಚಣಿ, ರಸ್ತೆ, ವಿದ್ಯುತ್ ಸಮಸ್ಯೆ, ಕುಡಿಯುವ ನೀರು ಸೇರಿದಂತೆ 100ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು.ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಸರಿಪಡಿಸಿ ವಿದ್ಯುತ್ ಪೂರೈಸಬೇಕು. ವಿದ್ಯುತ್‌ನಿಂದ ಜನರು, ಜಾನುವಾರುಗಳಿಗೆ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮವಹಿಸಬೇಕು. ಈ ಕುರಿತು ತಹಸೀಲ್ದಾರ್‌ರು ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಈಗಾಗಲೇ ಜಿಲ್ಲೆಯ ರೈತರಿಗೆ ಬೆಳೆಹಾನಿ ಪರಿಹಾರ ಒದಗಿಸಲಾಗಿದೆ. ಇನ್ನೂ ಬಾಕಿ ಹಣ ಬರಬೇಕಿದ್ದು ಬಳಿಕ ಉಳಿದ ರೈತರಿಗೂ ಪರಿಹಾರ ನೀಡಲಾಗುವುದು ಎಂದರು. ಕುಂದಗೋಳ-ಮುಳ್ಳೊಳ್ಳಿ ರಸ್ತೆಯಲ್ಲಿ ಮಳೆ ಹಾಗೂ ಒಳಚರಂಡಿ ನೀರಿನಿಂದ ಸಂಚರಿಸಲು ಆಗುತ್ತಿಲ್ಲ. ತಕ್ಷಣ ದುರಸ್ತಿ ಮಾಡುವಂತೆ ಜನರು ಮನವಿ ಮಾಡಿದಾಗ, ಜಿಲ್ಲಾಧಿಕಾರಿ ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.