ರಾಮನಗರ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾಗಿದ್ದ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳೇ ಹಣದಾಸೆಗೆ ಅವಧಿ ಮೀರಿದ ಮದ್ಯ ಮಾರಾಟ ಮಾಡುತ್ತಿರುವ ಆತಂಕಕಾರಿ ಘಟನೆಯೊಂದು ಬಯಲಿಗೆ ಬಂದಿದೆ. ಇದು ಗ್ರಾಮೀಣ ಭಾಗಗಳಲ್ಲಿರುವ ಪಾನ ಪ್ರಿಯರು ತಾವು ಸೇವಿಸುವ ಮದ್ಯದ ಬಗ್ಗೆ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ

ರಾಮನಗರ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾಗಿದ್ದ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳೇ ಹಣದಾಸೆಗೆ ಅವಧಿ ಮೀರಿದ ಮದ್ಯ ಮಾರಾಟ ಮಾಡುತ್ತಿರುವ ಆತಂಕಕಾರಿ ಘಟನೆಯೊಂದು ಬಯಲಿಗೆ ಬಂದಿದೆ. ಇದು ಗ್ರಾಮೀಣ ಭಾಗಗಳಲ್ಲಿರುವ ಪಾನ ಪ್ರಿಯರು ತಾವು ಸೇವಿಸುವ ಮದ್ಯದ ಬಗ್ಗೆ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

ಐಜೂರು ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ.

ನಿಗಮದ ಸೂಪರ್ ವೈಸರ್ ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್‌ಗಳಲ್ಲಿ ಅವಧಿ ಮೀರಿದ ಮದ್ಯ ಪತ್ತೆಯಾದ ಬಳಿಕ ಇಂತಹದೊಂದು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ.

ಐಜೂರು ಪೊಲೀಸರು ಸೂಪರ್ ವೈಸರ್​ ಸುರೇಶ್(52) ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಸ್ಟೇಷನ್ ಬೇಲ್ ಮೇಲೆ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಆದರೆ, ಈ ಘಟನೆ ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿ ಮೀರಿದ ಮದ್ಯವನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದುದ್ದಾಗಿ ಪೊಲೀಸರ ವಿಚಾರಣೆ ವೇಳೆ ಸೂಪರ್ ವೖಸರ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿ ಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು.

ಅವಧಿ ಮೀರಿದ ಯುಬಿ ಎಕ್ಸ್ ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್​ ಅನ್ನು ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿ ಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದರಿಂದ ಅವುಗಳನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು.

ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್​ಗಳಲ್ಲಿ 20 ಬಾಕ್ಸ್​ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎನ್ನಲಾಗಿದೆ.

ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್​ ವೈಸರ್​ ಸುರೇಶ್​ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಈ ಅಕ್ರಮ ದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ.

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ:

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಡೆತಡೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಗ್ರಾಮಗಳ ಹಲವು ಯುವಕರು, ಮಹಿಳೆಯರು ಮದ್ಯ ವ್ಯಸನಿಗಳಾಗುತ್ತಿದ್ದಾರೆ.

ಗ್ರಾಮಗಳ ಸಣ್ಣ ಪುಟ್ಟ ಚಿಲ್ಲರೆ ಅಂಗಡಿ, ಮನೆಗಳಲ್ಲಿ ಅಷ್ಟೇ ಯಾಕೆ ರಾಷ್ಟೀಯ ಹೆದ್ದಾರಿಯ ಪಕ್ಕದ ಅಂಗಡಿಗಳಲ್ಲಿ ಯಾರ ಭಯವಿಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ದಂಧೆ ನಡೆಯುತ್ತಿದ್ದು, ಇಂತಹ ಸಣ್ಣಪುಟ್ಟ ಅಂಗಡಿಗಳಿಗೆ ಕೆಲ ಬಾರ್‌ ಸಿಬ್ಬಂದಿಗಳು ಇದ್ದಲ್ಲಿಗೆ ಮದ್ಯ ಸರಬರಾಜು ಕೂಡ ಮಾಡುತ್ತಿದ್ದಾರೆ. ಆದರೀಗ ಅವಧಿ ಮೀರಿದ ಮದ್ಯ ಪೂರೖಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದ ಮೇಲೆ ಮದ್ಯ ಪ್ರಿಯರು ಆತಂಕ ಪಡುವಂತಾಗಿದೆ.

ಬಾಕ್ಸ್..................

ಸೂಪರ್‌ವೈಸರ್ ಬಂಧನ: ಮುಂದುವರಿದ ಕಾರ್ಯಾಚರಣೆ

ರಾಮನಗರದಲ್ಲಿ ಅವಧಿ ಮೀರಿದ ಮದ್ಯ ಮಾರಾಟದ ಆಘಾತಕಾರಿ ಪ್ರಕರಣ ಬಯಲಾಗಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳೇ ಜಪ್ತಿ ಮಾಡಿದ್ದ ಅವಧಿ ಮೀರಿದ ಮದ್ಯವನ್ನು ಹಣದಾಸೆಗೆ ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು. ಪ್ರಕರಣದ ಸಂಬಂಧ ಸೂಪರ್‌ವೈಸರ್ ಬಂಧನವಾಗಿದೆ. ಈ ಅಕ್ರಮದ ಬಗ್ಗೆ ತನಿಖೆ ಮುಂದುವರಿದಿದೆ.

ಸಾಮಾನ್ಯವಾಗಿ ಮದ್ಯ ಹಾಗೂ ಬಿಯರ್ ಡೇಟ್ ಎಕ್ಸ್ಪೈರಿ ಆದ ನಂತರ ಅವುಗಳನ್ನು ನಾಶಮಾಡುವ ನಿಯಮವಿದೆ. ಆದರೆ ಕಳ್ಳ ಅಧಿಕಾರಿಗಳು ಮದ್ಯದ ಬಾಟಲಿ ಮೇಲಿನ ಎಕ್ಸ್ಪೇರಿ ಡೇಟ್ ಅನ್ನು ತಿದ್ದಿ ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದು, ಇನ್ನು ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.

(ಫೋಟೋ ಕ್ಯಾಪ್ಷನ್‌)

ರಾಮನಗರದ ಐಜೂರು ಪೊಲೀಸರ ಕಾರ್ಯಾಚರಣೆ ವೇಳೆ ಸೂಪರ್ ವೖಸರ್ ಸುರೇಶ್ ಮನೆಯಲ್ಲಿ ಪತ್ತೆಯಾದ ಅವಧಿ ಮೀರಿದ ಮದ್ಯ.