ಸಾರಾಂಶ
- ಮುಂಗಾರು ಮಳೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ರವಾಹ ಮತ್ತು ಅತಿವೃಷ್ಠಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ನಗರದ ಕೆಸ್ವಾನ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ಪ್ರವಾಹ ಮತ್ತು ಅತಿವೃಷ್ಠಿಯಂತಹ ಪರಿಸ್ಥಿತಿಗಳನ್ನು ಎದುರಿಸಲು ಅಧಿಕಾರಿಗಳು ಸರ್ವ ರೀತಿಯಿಂದ ಸನ್ನದ್ಧರಾಗಿರಬೇಕು. ನದಿ, ಹಳ್ಳಗಳು ಹಾಗೂ ತಗ್ಗು ಪ್ರದೇಶಗಳ ವ್ಯಾಪ್ತಿಯ ಗ್ರಾಮಗಳು, ರಸ್ತೆಗಳನ್ನು ಈಗಿನಿಂದಲೆ ಗುರುತಿಸುವಂತೆ ಸೂಚಿಸಿದ ಅವರು, ನೋಡಲ್ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಮುಂದಿನ ದಿನಗಳಲ್ಲಿ ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಪೋರ್ಸ್ ಗಳನ್ನು ರಚಿಸಬೇಕು. ಈ ತಂಡದಲ್ಲಿ ಅಗ್ನಿಶಾಮಕ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಇರಬೇಕು. ತಕ್ಷಣ ಟಾಸ್ಕ್‌ಪೋರ್ಸ್ ಸಭೆ ಕರೆಯಬೇಕು. ಈ ತಂಡಗಳು ಅತಿವೃಷ್ಠಿಯಿಂದ ಆಗುವ ತೊಂದರೆ, ಅಪಾಯ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದರು.ಪ್ರವಾಹ ಬಂದ ನಂತರ ತಯಾರಿ ಮಾಡುವುದು ಬೇಡ. ಮಳೆ ಮುನ್ಸೂಚನೆ ಮಾಹಿತಿ ಇರುತ್ತದೆ. ಇದರ ಆಧಾರದ ಮೇಲೆ ಪ್ರವಾಹ ಭೀತಿ ಇರುವ ನದಿ ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರುಗಳ ರಕ್ಷಣೆಗೆ ಮುಂಚಿತವಾಗಿಯೇ ಮುಂದಾಗಬೇಕು. ತಾಲೂಕುಗಳಲ್ಲಿ ತಹಸೀಲ್ದಾರರು ಪ್ರವಾಹ ಪರಿಸ್ಥಿತಿ ಎದುರಿಸಲು ಮುಂದಾಳತ್ವ ವಹಿಸಬೇಕು. ಪೊಲೀಸ್, ಅಗ್ನಿಶಾಮಕ ಇಲಾಖೆ ಹೀಗೆ ಎಲ್ಲಾ ಅಧಿಕಾರಿಗಳ ಸಹಾಯ ಪಡೆದು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸೂಕ್ಷ್ಮ ಪ್ರದೇಶ ಗಳನ್ನು ಗುರುತಿಸಿ ಪ್ರವಾಹದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಲ್ಲದೆ. ಯಾವುದೇ ಅವಘಡಗಳು ಸಂಭವಿಸದಂತೆ ಕ್ರಮವಹಿಸುವಂತೆ ತಿಳಿಸಿದರು. ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸೂಕ್ಷ್ಮ ಪ್ರದೇಶದಲ್ಲಿ ಸೂಚನಾಫಲಕಗಳನ್ನು ಆಳವಡಿಸಿ, ದುರಸ್ತಿಯಲ್ಲಿರುವ ಸೇತುವೆಗಳ ದುರಸ್ತಿಗೆ ಇಲಾಖೆಗಳು ಕ್ರಮವಹಿಸುವಂತೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್
ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 6 ಕೆಸಿಕೆಎಂ 3ಮುಂಗಾರು ಮಳೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಚಿಕ್ಕಮಗಳೂರಿನ ಕೆಸ್ವಾನ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಭೆ ನಡೆಸಿದರು. ಎಸ್‌ಪಿ ಡಾ. ವಿಕ್ರಂ ಅಮಟೆ, ಎಸಿ ದಲ್ಜಿತ್‌ಕುಮಾರ್, ಡಿಎಫ್‌ಒ ರಮೇಶ್‌ಬಾಬು ಇದ್ದರು.