ಸಾರಾಂಶ
ಮುಂಡಗೋಡ: ಅರಣ್ಯ ಎಂಬುವುದು ಮುಕ್ತ ಖಜಾನೆ ಇದ್ದಂತೆ ಇದಕ್ಕೆ ಬೀಗ ಹಾಕಲು ಬರುವುದಿಲ್ಲ. ಇದರ ಚಾವಿ ಜನಸಾಮಾನ್ಯರ ಕೈಯಲ್ಲಿರುತ್ತದೆ. ಜನರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಂಡರೆ ಮಾತ್ರ ಅರಣ್ಯ ಉಳಿಯುತ್ತದೆ. ಜನರ ಪ್ರೀತಿಯಿಂದ ಅರಣ್ಯ ಬೆಳೆಸಿ ಎಂದು ಶಾಸಕ ಶಿವರಾಮ ಹೆಬ್ಬಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.ಮಂಗಳವಾರ ಇಲ್ಲಿಯ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರ ಮೇಲೆ ದಬ್ಬಾಳಿಕೆ ಮಾಡಿದರೆ ಸಹಿಸಿಕೊಳ್ಳುತ್ತೇವೆಂದು ಯಾರೂ ಭಾವಿಸಬಾರದು. ಸ್ಮಗ್ಲಿಂಗ್ ಮಾಡುವರಿಗೆ ಜೆಸಿಬಿ ಮೂಲಕ ಅರಣ್ಯ ನಾಶ ಮಾಡುವವರಿಗೆ ಬೆಂಬಲಿಸುವುದಿಲ್ಲ. ಆದರೆ ಯಾರ ಜಮೀನು ಜಿಪಿಎಸ್ ಆಗಿದೆಯೋ ಅವರಿಗೆ ತೊಂದರೆ ಕೊಟ್ಟರೆ ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದರು.
ಶೇ.೮೭ ಅರಣ್ಯ ಹೊಂದಿರುವ ಜಿಲ್ಲೆ ನಮ್ಮದು. ಹಾಗಂತ ಅರಣ್ಯ ಇಲಾಖೆಯವರು ಇದನ್ನು ಬೆಳೆಸಿದ್ದಲ್ಲ. ನೀವು ೧-೨ ವರ್ಷ ಬರುತ್ತೀರಿ ಹೋಗುತ್ತೀರಿ. ಅರಣ್ಯವನ್ನು ಬೆಳೆಸಿ ಉಳಿಸಿಕೊಂಡು ಬಂದವರು ನಮ್ಮ ಜಿಲ್ಲೆಯ ಜನ. ಅರಣ್ಯ ಬೆಳೆಸಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದು ನಮ್ಮೆಲ್ಲರ ಸಂಪತ್ತು. ಭವಿಷ್ಯದ ಜನಾಂಗದ ಸಂಪತ್ತು. ಇದನ್ನು ಉಳಿಸಿಕೊಳ್ಳಲೇಬೇಕು. ಇದರ ನಡುವೆ ಜನರು ಕೂಡ ಬದುಕಬೇಕು. ಅರಣ್ಯ ಇಲಾಖೆಯವರಿಗೆ ಹೇಗೆ ನೌಕರಿ ಮಾಡುವ ಹಕ್ಕಿದೆಯೋ ಹಾಗೆಯೇ ಜನರಿಗೂ ಬದುಕುವ ಹಕ್ಕಿದೆ. ಇಲ್ಲಿಯೇ ಹುಟ್ಟಿರುವ ನಾವು ಅರಣ್ಯದ ನಡುವೆಯೇ ಬದುಕಿ ಸಾಯಬೇಕು. ಹಾಗಾಗಿ ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಿ ಎಂದು ಎಚ್ಚರಿಸಿದರು.ಜನರು ಒಂದು ಸಣ್ಣ ಕಟ್ಟಿಗೆ ತುಂಡು ಕತ್ತರಿಸಿದರೆ ಬಂಧಿಸಲಾಗುತ್ತಿದೆ. ಆದರೆ ತಾಲೂಕಿನ ಗುಂಜಾವತಿ, ಮೈನಳ್ಳಿ ಭಾಗದಲ್ಲಿ ಇತ್ತೀಚೆಗೆ ಬಿದ್ದ ಮಳೆಗಾಳಿಯಿಂದ ಅರಣ್ಯದಲ್ಲಿ ಕೋಟ್ಯಂತರ ಮೌಲ್ಯದ ಮರಗಳು ಬಿದ್ದಿದ್ದು, ಅವುಗಳ ಬಗ್ಗೆ ವಿಚಾರ ಮಾಡಿ ಆ ಕಟ್ಟಿಗೆಯನ್ನು ಟೆಂಡರ್ ಕರೆದು ಮಾರಾಟ ಮಾಡಿ ಅರಣ್ಯ ಇಲಾಖೆಗೆ ಉತ್ಪನ್ನ ಆಗುವಂತೆ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನ, ಸನವಳ್ಳಿ, ಅತ್ತಿವೇರಿ ಉದ್ಯಾನ ನಿರ್ವಹಣೆ ಮಾಡುವಂತೆ ಶಾಸಕ ಶಿವರಾಮ ಹೆಬ್ಬಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಳೆಗಾಲ ಪ್ರಾರಂಭವಾಗುವ ಮುನ್ನ ಅಗತ್ಯ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಎಂದು ಶಾಸಕರು ಹೇಳಿದರು. ಆಗ, ತಾಲೂಕಿನ ೧೮ ಕಡೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇರುವ ಬಗ್ಗೆ ಸಿಡಿಪಿಒ ರಾಮು ಬಯಲುಸೀಮೆ ಸಭೆಯಲ್ಲಿ ತಿಳಿಸಿದರು. ಸ್ಥಳಿಯ ಪ್ರಾಥಮಿಕ ಶಾಲಾವರಣದಲ್ಲಿಯೇ ಅಂಗನವಾಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ಶಾಸಕ ಹೆಬ್ಬಾರ ಬಿಇಒ ಜಿ.ಸುಮಾಗೆ ಸಲಹೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ಹೊಂದಿರುವ ತಾಲೂಕಿನ ಗುಂಜಾವತಿ, ಮೈನಳ್ಳಿ, ಚವಡಳ್ಳಿ ಸೇರಿದಂತೆ ವಿವಿಧ ಭಾಗಗಳಿಗೆ ಸಮರ್ಪಕ ನೀರು ಪೂರೈಸುವ ಯೋಜನೆ ರೂಪಿಸಲಾಗುವುದು ಎಂದು ಶಾಸಕ ತಿಳಿಸಿದರು.ಸಾರ್ವಜನಿಕರಿಗೆ ಸಾಧ್ಯವಾದಷ್ಟು ಸ್ಥಳಿಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ. ಫೆಸಿಲಿಟಿ ಇಲ್ಲದ, ಅನಿವಾರ್ಯ ಪ್ರಸಂಗದಲ್ಲಿ ಮಾತ್ರ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳುಹಿಸಿ ಸಣ್ಣ ಪುಟ್ಟ ಕಾಯಿಲೆಗೂ ಹುಬ್ಬಳ್ಳಿಗೆ ಕಳುಹಿಸಿ ಜನರಿಗೆ ತೊಂದರೆ ನೀಡದಂತೆ ಶಾಸಕರು ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಇಒ ಟಿ.ವೈ. ದಾಸನಕೊಪ್ಪ, ತಹಶೀಲದಾರ ಶಂಕರ ಗೌಡಿ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ, ಎಚ್.ಎಂ.ನಾಯ್ಕ, ಶಾರದಾ ರಾಠೋಡ, ರಾಜಶೇಖರ ಹಿರೇಮಠ, ಎಂ.ಎನ್.ದುಂಡಸಿ, ಗೋಪಾಲ ಪಾಟೀಲ ಇದ್ದರು.