ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಅಧಿಕಾರಿಗಳು ಗಮನಹರಿಸಬೇಕು: ಬಿ.ಎ.ಪಾಟೀಲ್

| Published : Apr 07 2025, 12:35 AM IST

ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಅಧಿಕಾರಿಗಳು ಗಮನಹರಿಸಬೇಕು: ಬಿ.ಎ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಅನಾದಿ ಕಾಲದಿಂದಲೂ ನೀರು ಭೂಮಿಗಾಗಿ ಯುದ್ಧಗಳೇ ನಡೆದಿವೆ. ಹಾಗಾಗಿ ಸರ್ಕಾರಿ ಭೂಮಿ ಸಂರಕ್ಷಣೆ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾಡಳಿತ ಇವರ ಸಹಯೋಗದೊಂದಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಶನಿವಾರ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಕುರುಕ್ಷೇತ್ರ ನಡೆದಿರುವುದೇ ಭೂಮಿಗಾಗಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅನಾದಿಕಾಲದಿಂದಲೂ ನೀರು, ಭೂಮಿಗಾಗಿ ಯುದ್ಧಗಳೇ ನಡೆದಿವೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಿದೆ. ಜೊತೆಗೆ ಜನರಲ್ಲಿ ದುರಾಸೆಯು ಸಹ ಹೆಚ್ಚಾಗಿದೆ. ಆದ್ದರಿಂದ ಭೂ ಕಬಳಿಕೆಯೂ ಸಹ ಅಧಿಕವಾಗುತ್ತಿದೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಣೆ ಬಗ್ಗೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲೀಕ ಅವರು ಮಾತನಾಡಿ ಕಾನೂನಿನಲ್ಲಿ ಎರಡು ರೀತಿ ಇದ್ದು, ಒಂದು ಮನುಷ್ಯ ಮಾಡಿದ ಕಾನೂನು, ಇನ್ನೊಂದು ಪ್ರಕೃತಿದತ್ತವಾದ ನಿಯಮಗಳಿದ್ದು, ಸಂವಿಧಾನದ ನಿಯಮಗಳು ಒಂದು ವ್ಯವಸ್ಥೆಯಲ್ಲಿ ಕಾನೂನು ಆಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸುವುದು ಅತ್ಯಗತ್ಯವಾಗಿದೆ ಎಂದರು.

ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಎಲ್.ನಾರಾಯಣಸ್ವಾಮಿ ಅವರು ಮಾತನಾಡಿ ಒಂದು ಗೊತ್ತು ಪಡಿಸುವ ಪ್ರದೇಶ, ಗಡಿ ವಿಸ್ತೀರ್ಣ, ದಾರಿ, ಮತ್ತಿತರ ಬಗ್ಗೆ ಸರ್ವೆ ಮಾಡಲಾಗುತ್ತದೆ ಎಂದು ಹೇಳಿದರು.

ಶಾಲಾ-ಕಾಲೇಜು, ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳು, ಪೊಲೀಸ್ ಠಾಣೆ ಹೀಗೆ ಪ್ರತಿಯೊಂದಕ್ಕೂ ಸಹ ಜಮೀನು ಬೇಕಿದ್ದು, ಇರುವ ಅಲ್ಪಸ್ವಲ್ಪ ಜಮೀನನ್ನಾದರೂ ಉಳಿಸಬೇಕಿದೆ ಎಂದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ ಅವರು 192(ಎ) ಸಂಬಂಧಿಸಿದಂತೆ ಮಾತನಾಡಿ ಮಹಜರು, ದಿನಾಂಕ, ಭೂಮಿ ಸರ್ವೆ ಮಾಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಇರಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುವುದು ಎಷ್ಟೋ ಕಡೆ ಕಂಡುಬರುತ್ತಿದೆ. ಮಳೆ ಬಂದಾಗ ಪರಿತಪಿಸುತ್ತಾರೆ. ಆದ್ದರಿಂದ ಕರ್ನಾಟಕ ಕೆರೆ ಸಂರಕ್ಷಣಾ ಕಾಯ್ದೆಯಂತೆ ಕೆರೆ, ಕಟ್ಟೆ, ಕಾಲುವೆಗಳನ್ನು ಉಳಿಸಬೇಕು. ಇದರಿಂದ ಜಲ ಸಂರಕ್ಷಣೆ ಸಾಧ್ಯವಾಗಲಿದೆ ಎಂದರು.

ತೀವ್ರ ನಗರೀಕರಣ, ಕೈಗಾರಿಕೀಕರಣ ಮತ್ತು ಜನಸಂಖ್ಯಾ ಸ್ಫೋಟದಿಂದ ಭೂ ಕಬಳಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಬೇಕು ಎಂದರು.

ನಗರಸಭೆ ಕಂದಾಯ ಅಧಿಕಾರಿ ಎಂ.ಎ.ತಾಹಿರ್ ಮಾತನಾಡಿ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ರಸ್ತೆ, ಮಾರುಕಟ್ಟೆ, ಉದ್ಯಾನವನ, ಆಸ್ತಿಪಾಸ್ತಿ ರಕ್ಷಣೆ ಒತ್ತುವರಿ ಕಂಡು ಬರುತ್ತಿದೆ. ಅದನ್ನು ತಡೆಯುವಲ್ಲಿ ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿವೆ ಎಂದರು.

ಮಡಿಕೇರಿ ನಗರಸಭೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ತೆರವುಗೊಳಿಸಲಾಗಿರುವುದು, ಹಾಗೆಯೇ ಕಾಲೇಜು ರಸ್ತೆ ಅಗಲೀಕರಣ ಹೀಗೆ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ತೆರವುಗೊಳಿಸುವಂತಾಗಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಭಾಸ್ಕರ್, ಜಗನ್ನಾಥ್, ತಹಸೀಲ್ದಾರರಾದ ಪ್ರವೀಣ್ ಕುಮಾರ್, ಇತರರು ಇದ್ದರು. ಉಮೇಶ್ ಅವರು ನಿರೂಪಿಸಿದರು.