ಅಧಿಕಾರಿಗಳು ಸಂಚಾರ ನಿಯಮ ಪಾಲಿಸಲಿ: ಮಾತಾ ಮಂಜಮ್ಮ ಜೋಗತಿ

| Published : Feb 01 2025, 12:02 AM IST

ಸಾರಾಂಶ

ದೊಡ್ಡ, ದೊಡ್ಡ ಅಧಿಕಾರಿಗಳು ಸರಿಯಾಗಿ ನಿಯಮ ಪಾಲನೆ ಮಾಡಿದರೆ ಸಾರ್ವಜನಿಕರು ಕೂಡ ನಿಯಮ ಪಾಲನೆ ಮಾಡುತ್ತಾರೆ.

ಹೊಸಪೇಟೆ: ದೊಡ್ಡ, ದೊಡ್ಡ ಅಧಿಕಾರಿಗಳು ಸರಿಯಾಗಿ ನಿಯಮ ಪಾಲನೆ ಮಾಡಿದರೆ ಸಾರ್ವಜನಿಕರು ಕೂಡ ನಿಯಮ ಪಾಲನೆ ಮಾಡುತ್ತಾರೆ. ನೀವು ಬೇಗ ತಲುಪಬೇಕು ಅಂದ್ರೆ ಮನೆ ಬೇಗ ಬಿಡಬೇಕು. ಬೇಗ ಮನೆ ಬಿಟ್ಟರೆ ಅಪಘಾತಗಳು ತಪ್ಪಿಸಬಹುದು, ಜೀವ ಉಳಿಸಬಹುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದರು.

ನಗರದ ಡಾ.ಪುನೀತರಾಜ್‍ಕುಮಾರ್ ವೃತ್ತದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇವತ್ತು ದೊಡ್ಡ, ದೊಡ್ಡ ಅಧಿಕಾರಿಗಳು ಮೊದಲು ನಿಯಮ ಪಾಲನೆ ಮಾಡಿ, ಆ ಬಳಿಕ ಜನ ಸಾಮಾನ್ಯರಿಗೆ ಹೇಳಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿದೆ ಎಂದರು.

ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಮಾತನಾಡಿ, ಜಿಲ್ಲೆಯಲ್ಲಿ 275 ಸಾರ್ವಜನಿಕ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಒಂದು ನಿಮಿಷದ ನಿರ್ಲಕ್ಷ್ಯತನ ಒಂದು ಅಮೂಲ್ಯ ಜೀವವನ್ನು ಬಲಿ ತೆಗೆದುಕೊಳ್ಳಲಿದೆ. ಪ್ರತಿಯೊಬ್ಬರು ರಸ್ತೆಯಲ್ಲಿ ಸಂಚರಿಸುವ ವೇಳೆ ಯಾವುದೇ ಅಪಘಾತಗಳು ಕಂಡು ಬಂದರೆ ಶೀಘ್ರ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವುದು ಮುಖ್ಯವಾಗಿದೆ. ಅಪಘಾತ ವೇಳೆಯಲ್ಲಿ ಆಸ್ಪತ್ರೆಗೆ ದಾಖಲಿಸಿದವರ ಹೆಸರು, ವಿಳಾಸದ ಅಗತ್ಯವಿಲ್ಲ. ಮಾನವೀಯತೆ ಮರೆಯದೇ ಅಪಘಾತವಾದವರನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕು ಎಂದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಗಾಂಧಿ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾ ಪುಣ್ಯಮೂರ್ತಿ ವೃತ್ತ, ಪುನೀತ್ ರಾಜಕುಮಾರ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಕಾಲ್ನಡಿಗೆ ಮೂಲಕ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಜಾಥಾ ನಡೆಸಲಾಯಿತು.

ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಈಶ್ವರ್ ಚವ್ಹಾಣ್, ಸಹಾಯಕ ಆಯುಕ್ತ ವಿವೇಕಾನಂದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಡಿವೈಎಸ್‌ಪಿ ಮಂಜುನಾಥ ಮತ್ತಿತರರಿದ್ದರು.

ಜಾಥಾದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಜಂಟಿ ಸಾರಿಗೆ ಆಯುಕ್ತರು, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ ಸಿಬ್ಬಂದಿ, ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುನೀತ್ ರಾಜಕುಮಾರ್ ವೃತ್ತದಲ್ಲಿ ಮರಿಯಮ್ಮನಹಳ್ಳಿ ಕಲಾವಿದರು ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು.

ಹೊಸಪೇಟೆಯ ಡಾ.ಪುನೀತರಾಜ್‍ಕುಮಾರ್ ವೃತ್ತದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಭಾಗಿಯಾಗಿ ಮಾತಾ ಮಂಜಮ್ಮ ಜೋಗತಿ ಮಾತನಾಡಿದರು.