ಪ್ರತಿಷ್ಠಾನವು ಸರ್ಕಾರದ ಆಡಳಿತದಲ್ಲಿ ಉತ್ತಮ ಸೇವೆಯಲ್ಲಿರುವ ಅಧಿಕಾರಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನ ಮಾಡುತ್ತಿದೆ. ಇದರಿಂದ ಸಾಮಾಜಿಕ ಸೇವೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತಿದೆ

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಅಧಿಕಾರ ಎಂಬ ಅಹಂಕಾರ ತಲೆಗೇರಿಸಿಕೊಳ್ಳದೆ ಹೃದಯದಿಂದ ಉತ್ತಮ ಕೆಲಸ ಮಾಡಿ ಜನಮಾನಸದಲ್ಲಿ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನ ವತಿಯಿಂದ ಕೃಷಿಕ ಸರ್ವೋದಯ ಫೌಂಡೇಷನ್, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ , ಕರ್ನಾಟಕ ಜನಪದ ಪರಿಷತ್ತು, ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಹಾಗೂ ಜಿಲ್ಲಾ ಯುವ ಪರಿಷತ್ ಸಹಯೋಗದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಶೇ.85ರಷ್ಟು ಕುಟುಂಬಗಳು ಕೃಷಿ ಅವಲಂಬಿಸಿವೆ. ಪ್ರಶಸ್ತಿ ಸ್ವೀಕರಿಸಿದ ಸುವರ್ಣ ಅವರು ಸಾವಯವ ಸಂಘ ರಚಿಸಿ ಉತ್ತಮ ಗುಣಮಟ್ಟದ ಆಹಾರ ಉತ್ಪಾದಿಸಿ ಕೊಡೋಣ. ಇಲ್ಲದಿದ್ದರೆ ಈ ನಾಡು ಅನಾರೋಗ್ಯ ಪೀಡಿತವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ವಿದ್ಯಾವಂತರು, ತಿಳಿದವರು, ಓದಿದವರು, ಅನುಭವ ಇರುವವರು ಈ ತಾಯಿಯ ಹೃದಯದ ಮಾತು ಗಮನಿಸಿ ಕೃಷಿಯಲ್ಲಿ ಸಾವಯವ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯೋಣ ಎಂದು ಸಲಹೆ ನೀಡಿದರು.

ಶ್ರೀಮತಿ ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ಓರ್ವ ಮಹಿಳೆಗೆ ಮಾತ್ರ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಇನ್ನೊಬ್ಬರಿಗೆ ಪ್ರಶಸ್ತಿ ನೀಡಿದರೆ ರೈತ ಹೆಣ್ಣು ಮಕ್ಕಳನ್ನು ಗುರುತಿಸಿ ಸಾವಯವ ಕೃಷಿ ಉಳಿಯಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಳ್ಳಿಯ ಮಗನಾಗಿ ಯಾವುದೇ ಸೌಲಭ್ಯಗಳು ಇಲ್ಲದ ಸಮಯದಲ್ಲಿ ಟಿ.ತಿಮ್ಮೇಗೌಡರು ಐಎಎಸ್ ಅಧಿಕಾರಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಸರ್ವೇ ಇಲಾಖೆ ಕಮಿಷನರ್ ಆಗಿ ರೈತರ ಪರ ಕೆಲಸ ಮಾಡಲು ಪ್ರೇರಣೆಯಾಗಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ರೈತರಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಭಾಗದ ಎಂಟತ್ತು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅಪಾರವಾಗಿ ಶ್ರಮಿಸಿದ್ದರು ಎಂದು ಹೇಳಿದರು.

ಬೆಂಗಳೂರು ವಿಜಯನಗರ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಇಡೀ ಪ್ರಪಂಚದಲ್ಲಿ ಮನುಷ್ಯ ಜನ್ಮ ದೊಡ್ಡದು, ಆದ್ದರಿಂದ ಮನುಷ್ಯ ಪರೋಪಕಾರಿ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ನಾವು ಪ್ರಾಣಿ, ಪಕ್ಷಿ, ಪರಿಸರ ನೋಡುತ್ತೇವೆ. ಗಿಡ- ಮರಗಳು ಹಣ್ಣುಗಳನ್ನು, ತೆಂಗಿನ ಮರ (ಕಲ್ಪವೃಕ್ಷ) ಎಳನೀರು, ಕಾಯಿ ಎಲ್ಲವನ್ನೂ ಕೊಡುತ್ತದೆ. ಈ ಗಿಡ- ಮರಗಳು ತಾನು ಕೊಟ್ಟಿದ್ದನ್ನು ಸೇವಿಸಲ್ಲ. ಕಾವೇರಿ ನದಿ ಕೋಟ್ಯಾಂತರ ಜನರಿಗೆ ನೀರು ನೀಡುತ್ತದೆ. ಹಸು ಹಾಲು ಕೊಡುತ್ತದೆ. ಅದರಂತೆ ಮಾನವ ತಮಗೆ ಬೇಕಾದಷ್ಟು ಇಟ್ಟುಕೊಂಡು ಹಂಚುವ ಪರೋಪಕಾರಿ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸಾರ್ಥಕ ಭಾವನೆ ಬರುತ್ತದೆ ಎಂದು ಕಿವಿಮಾತು ಹೇಳಿದರು.

ವಿಶ್ರಾಂತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮಾತನಾಡಿ, ಪ್ರತಿಷ್ಠಾನವು ಸರ್ಕಾರದ ಆಡಳಿತದಲ್ಲಿ ಉತ್ತಮ ಸೇವೆಯಲ್ಲಿರುವ ಅಧಿಕಾರಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನ ಮಾಡುತ್ತಿದೆ. ಇದರಿಂದ ಸಾಮಾಜಿಕ ಸೇವೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತಿದೆ ಎಂದರು.

ಪ್ರತಿಷ್ಠಾನವು ಮೊದಲ ವರ್ಷ ಚಿಕ್ಕಬಳ್ಳಾಪುರ ಡೀಸಿ ಆಗಿದ್ದ ಡಾ.ಲತಾ, ಎರಡನೇ ವರ್ಷ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ದಯಾನಂದ್ ಅವರ ಸೇವೆ ಗುರುತಿಸಿ ಪ್ರಶಸ್ತಿ ನೀಡಿತ್ತು. ಈ ವರ್ಷ ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿ ಡಾ.ಕೆ.ಜ್ಯೋತಿಯವರಿಗೆ ನೀಡುತ್ತಿರುವುದಕ್ಕೆ ಜಿಲ್ಲೆಗೆ ಹೆಮ್ಮೆಯಾಗಿದೆ ಎಂದು ಹೇಳಿದರು.