ಅಧಿಕಾರಿಗಳು ಸಾರ್ವಜನಿಕ ಸೇವೆ ಶ್ರದ್ಧೆಯಿಂದ ನಿರ್ವಹಿಸಬೇಕು

| Published : Jun 16 2024, 01:54 AM IST

ಅಧಿಕಾರಿಗಳು ಸಾರ್ವಜನಿಕ ಸೇವೆ ಶ್ರದ್ಧೆಯಿಂದ ನಿರ್ವಹಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರು ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಯಿತು.

ಕೆಡಿಪಿ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ । ಬಿತ್ತನೆಬೀಜ, ರಸಗೊಬ್ಬರ ವಿತರಿಸಲು ಸಲಹೆ ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಸಾರ್ವಜನಿಕ ಕೆಲಸದಲ್ಲಿ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ತವರು ಕ್ಷೇತ್ರದ ಅಭಿವೃದ್ಧಿ ಕನಸು ಕಟ್ಟಿಕೊಂಡಿರುವ ಪ್ರತಿ ಇಲಾಖೆ ಅಧಿಕಾರಿಗಳು ಸಹಕಾರ ನೀಡುವ ಜತೆಗೆ ಪ್ರಾಮಾಣಿಕತೆ ಪ್ರದರ್ಶಿಸಬೇಕೆಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲೂಕು ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಇದೆ. ಅಧಿಕಾರಿಗಳು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ, ಈ ಹಣೆಪಟ್ಟಿ ತೊಲಗಿಸಿ, ಅಭಿವೃದ್ಧಿ ಹೊಂದಿದ ತಾಲೂಕಾಗಿ ರೂಪಿಸಬೇಕು ಎಂದರು.

ಈ ಬಾರಿ ಉತ್ತಮ ಮಳೆ ನಿರೀಕ್ಷೆ ಇದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯ ಬಿತ್ತನೆಬೀಜ ಮತ್ತು ಗೊಬ್ಬರ ವಿತರಣೆ ಮಾಡಬೇಕು ಎಂದರು. ಆಗ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್ ಮಾತನಾಡಿ, ಕಳೆದ ಬಾರಿ ಬರದಿಂದಾಗಿ ರೈತರಲ್ಲಿ ಬಿತ್ತನೆಬೀಜ ದಾಸ್ತಾನು ಇಲ್ಲದಾಗಿದೆ. 2 ಹೋಬಳಿಯಿಂದ 32 ಸಾವಿರ ಹೇಕ್ಟರ್‌ ಬಿತ್ತನೆ ಗುರಿ ಇದೆ. 12 ಸಾವಿರ ಹೇಕ್ಟೆರ್‌ ಬಿತ್ತನೆ ಬೀಜದ ಬೇಡಿಕೆ ಇದೆ. ಶೇಂಗಾ, ತೊಗರಿ, ಹತ್ತಿ, ಮುಸುಕಿನ ಜೋಳ, ರಾಗಿ, ಔಡಲ, ನವಣೆ ಸೇರಿ ರೈತರಿಗೆ ಅಗತ್ಯ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಜಲಜೀವನ್ ಮಿಷನ್ ಅಡಿಯಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮ ವಹಿಸಬೇಕು. ತುಂಗಭದ್ರಾ ಹಿನ್ನೀರು ಯೋಜನೆ ವಿಳಂಬ ಆಗುವುದರಿಂದ, ಈಗಲೇ ನೀರಿನ ಮೂಲ ಹುಡುಕಿ ಜನತೆಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ನೀರು ಸರಬರಾಜು ಇಲಾಖೆ ಅಧಿಕಾರಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಯೋಜನೆ ಅಭಿಯಂತರ ಪ್ರಜ್ವಲ್ ಮಾತನಾಡಿ, ತಾಲೂಕಿನಲ್ಲಿ ೨೦೨೧- 20೨೨ನೇ ಸಾಲಿನ ಜೆಜೆಎಂ ಯೋಜನೆಯಡಿ ಒಟ್ಟು ೧೧೩ ಕಾಮಗಾರಿಗಳಲ್ಲಿ ೭೧ ಕಾಮಗಾರಿಗಳು ಪೂರ್ಣಗೊಂಡಿವೆ. ೩೪ ಕಾಮಗಾರಿಗಳು ಪ್ರಗತಿಯಲ್ಲಿವೆ. ೪ ಕಾಮಗಾರಿಗಳು ಪ್ರಾರಂಭಿಸಬೇಕಾಗಿವೆ. ೪ ಕಾಮಗಾರಿಗಳು ಟೆಂಡರ್ ಪ್ರಗತಿಯಲ್ಲಿವೆ. ತಾಲೂಕಿನಲ್ಲಿ ಕೆಟ್ಟಿರುವ ಕೆಲ ಜಲ ಶುದ್ಧೀಕರಣ ಘಟಕಗಳ ರಿಪೇರಿ ಮಾಡಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ತಾಪಂ ಇಒ ಎಂ.ಆರ್. ಪ್ರಕಾಶ್ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳ ದುರಸ್ತಿಗೊಳಿಸಲು ಯೋಜನೆ ರೂಪಿಸಿ ಕಡತ ಸಲ್ಲಿಸಬೇಕು ಎಂದರು. ಆಗ ಕ್ಷೇತ್ರ ಶಿಕ್ಷಣಾಧಿಕಾರಿ ಇ.ನಿರ್ಮಲಾದೇವಿ, ತಾಲೂಕಿನಲ್ಲಿ ೪೦ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪಟ್ಟಿ ನೀಡಿದ್ದು, ಕೆಎಂಇಆರ್‌ಸಿ ಯೋಜನೆಯಲ್ಲಿ ₹೧೫ ಕೋಟಿ ಬಿಡುಗಡೆಯಾಗಿದೆ. ಡಿಪಿಆರ್ ಪ್ಲಾನ್ ಮಾಡಿಸಿ ಶಾಲಾಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಕೆಲ ಅಂಗನವಾಡಿಗಳಲ್ಲಿ ದೂರುಗಳು ವ್ಯಕ್ತವಾಗುತ್ತಿವೆ. ಮಕ್ಕಳಿಗೆ ಸಲ್ಲಬೇಕಾದ ಪೌಷ್ಟಿಕ ಆಹಾರ ಪ್ರಾಮಾಣಿಕವಾಗಿ ಸಲ್ಲಬೇಕು. ಲೋಪಗಳು ಜರುಗದಂತೆ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕೆಂದು ಸಿಡಿಪಿಒ ನವೀನ್‌ ಅವರಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಜಗದೀಶ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪಪಂ ಹಾಗೂ ತಾಪಂ ಸದಸ್ಯರು ಇದ್ದರು.

ಅತಿಥಿ ಶಿಕ್ಷಕರ ಹುದ್ದೆಗೆ ಎಸ್‌ಸಿ, ಎಸ್‌ಟಿಯನ್ನೂ ಪರಿಗಣಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಇ.ನಿರ್ಮಲಾದೇವಿ ಮಾತನಾಡಿ, ತಾಲೂಕಿನಲ್ಲಿ ಶಾಲೆಗಳು ಪ್ರಾರಂಭವಾಗಿವೆ. ಶಾಲಾ ಮಕ್ಕಳಿಗೆ ಶೇ.೮೬ರಷ್ಟು ಪಠ್ಯಪುಸ್ತಕ ಹಾಗೂ ಸಮವಸ್ತ್ರ ಕಲ್ಪಿಸಲಾಗಿದೆ ಎಂದರು. ಆಗ ಶಾಸಕರು, ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು. ಬಹುತೇಕ ಗ್ರಾಮಗಳಲ್ಲಿ ಶಾಲಾ ಕೊಠಡಿ ಹಾಳಾಗಿದ್ದು, ಕೂಡಲೇ ದುರಸ್ತಿಗೊಳಿಸಬೇಕು. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದ್ದು, ಹುದ್ದೆಗೆ ನೇಮಿಸಿಕೊಳ್ಳುವಾಗ ಕೇವಲ ಮೆರಿಟ್ ಮತ್ತು ಅನುಭವದ ಜೊತೆಗೆ ಹೊಸಬರು, ಎಸ್ಸಿ/ಎಸ್ಟಿ ಹಾಗೂ ಮಹಿಳೆಯರನ್ನು ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.