ನಮ್ಮ ಮಕ್ಕಳೆಲ್ಲ ಸರ್ಕಾರಿ ಶಾಲೀಗೆ ಹೋಗ್ತಾವು, ಅವರಿಗೆ ಕುಳಿತುಕೊಂಡು ಅಭ್ಯಾಸ ಮಾಡಲಿಕ್ಕ ರೂಮ್ ಇಲ್ಲ
ಹೂವಿನಹಡಗಲಿ: ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಪಂ ಆವರಣದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿತ್ತು.
ಶಾಸಕ ಕೃಷ್ಣನಾಯ್ಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಹಳ್ಳಿಗಳ ಸಮಸ್ಯೆಗಳ ಕುರಿತು ಅಧಿಕಾರಿಗಳು ಸಂಪೂರ್ಣ ನಿಗಾ ವಹಿಸಬೇಕಿದೆ. ಕುಡಿವ ನೀರು, ಸ್ವಚ್ಛತೆ, ವಿದ್ಯುತ್, ಉತ್ತಮ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸುವ ಕಡೆಗೆ ಗಮನ ಹರಿಸಬೇಕಿದೆ. ಅಧಿಕಾರಿಗಳಲ್ಲಿ ಸೇವಾ ಮನೋಭಾವನೆ ನಿರಂತರ ಹೊಂದಿರಬೇಕೆಂದು ಹೇಳಿದರು.ಈ ಹಿಂದೆ ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಸರಿಯಾದ ಮಾಹಿತಿ ನೀಡಿದೇ ಅವರ ಅರ್ಜಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದರು. ಆದರಿಂದ ಸರ್ಕಾರ ಪ್ರತ್ಯೇಕ ಪ್ರಜಾ ಸೇವೆ ಎಂಬ ಇಲಾಖೆ ರಚಿಸಿ, ನಿಮ್ಮ ದೂರು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ದಾಖಲು ಮಾಡಿ ಸಕಾರಾತ್ಮಕ ವಿಲೇವಾರಿ ಮಾಡಲಾಗುತ್ತಿದೆ. ಅಧಿಕಾರಿಗಳು ಹಳ್ಳಿಗಳಲ್ಲಿ ಕೆಲಸ ಮಾಡುವಾಗ ನಿಮ್ಮ ಕೊಡುಗೆ ಇರಬೇಕು, ನಮ್ಮ ಬಳಿ ದೂರು ಬರದಂತೆ ನೀವು ನೋಡಿಕೊಳ್ಳಬೇಕು, ಕೇವಲ ಅನುದಾನಕ್ಕೆ ಮಾತ್ರ ಜನ ನಮ್ಮ ಬರುವಂತೆ ನೋಡಿಕೊಳ್ಳಿ ಎಂದರು.
ನಮ್ಮ ಮಕ್ಕಳೆಲ್ಲ ಸರ್ಕಾರಿ ಶಾಲೀಗೆ ಹೋಗ್ತಾವು, ಅವರಿಗೆ ಕುಳಿತುಕೊಂಡು ಅಭ್ಯಾಸ ಮಾಡಲಿಕ್ಕ ರೂಮ್ ಇಲ್ಲ, ಮರದ ನೆರಳಿನ ನೆಲದಲ್ಲಿ ಕುಳಿತುಕೊಳ್ಳುತ್ತಾರೆ, ಮೇಷ್ಟ್ರು ಅಲ್ಲೇ ಪಾಠ ಮಾಡುವ ಸ್ಥಿತಿ ಇದೆ. 4 ಕೂಠಡಿಗಳ ವ್ಯವಸ್ಥೆ, ಆಟದ ಮೈದಾನ, ಸ್ಮಾಟ್ಕ್ಲಾಸ್, ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿವ ನೀರಿಲ್ಲ, ನಮ್ಮೂರಿನಲ್ಲಿ ಪ್ರೌಢ ಶಾಲೆ ಇಲ್ಲ, ಇಲ್ಲಿಂದ ಹೊಸ ಅಲ್ಲಿಪುರಕ್ಕೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಬಸ್ಸಿನ ಸೌಲಭ್ಯ ಇಲ್ಲ, ನಡೆದುಕೊಂಡು ಹೋಗುತ್ತಾರೆ, ನಮ್ಮ ಗ್ರಾಮಕ್ಕೆ ಪ್ರೌಢ ಶಾಲೆ ಕೊಡಿ, ಇಂತಹ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಶಾಸಕ ಕೃಷ್ಣನಾಯ್ಕ ಬಳಿ ಗ್ರಾಮಸ್ಥರು ತಮ್ಮ ಮನವಿ ಸಲ್ಲಿಸಿದರು.ಈ ಕುರಿತು ಸಂಬಂಧ ಪಟ್ಟ ಸಚಿವರ ಬಳಿ ಚರ್ಚಿಸಿ ಸರ್ಕಾರದಿಂದ ಅನುದಾನ ತರುವಂತಹ ಕೆಲಸ ಮಾಡುವೆ, ಸರ್ಕಾರಿ ಶಾಲೆಗೆ ಅಗತ್ಯವಿರುವ ಸರ್ಕಾರದ ಜಮೀನು ಲಭ್ಯತೆ ನೋಡಿಕೊಂಡು ಮಂಜೂರು ಮಾಡುವಂತಹ ಕೆಲಸ ಮಾಡುತ್ತೇವೆಂದು ಭರವಸೆ ನೀಡಿದರು.
ನಮ್ಮೂರಿನಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ, ಯುವಕರು ಮದ್ಯದ ದಾಸರಾಗಿದ್ದಾರೆ. ಮೊದಲು ಅಕ್ರಮ ಮದ್ಯ ಬಂದ್ ಮಾಡಿ ಎಂದು ಮಹಿಳೆಯರು ಶಾಸಕರ ಬಳಿ ತಮ್ಮ ನೋವು ತೊಡಿಕೊಂಡರು.ಅಬಕಾರಿ ಇಲಾಖೆ ತಮ್ಮ ಗುರಿ ಸಾಧನೆಗಾಗಿ ಹಳ್ಳಿಗಳಿಗೆ ಮದ್ಯ ಸಾಗಿಸಿ ಯುವಕರನ್ನು ಸಾಯಿಸುತ್ತಿದ್ದಾರೆ. ಸ್ಥಳದಲ್ಲೇ ಇದ್ದ ಅಬಕಾರಿ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾಗನೂರು ಗ್ರಾಮದಲ್ಲಿ ಯುವಕರು ಮದ್ಯದ ದಾಸರಾಗಿದ್ದು, ಆ ಊರಿನಲ್ಲಿ ಶೇ. 25 ರಷ್ಟು ಮಾತ್ರ ಗಂಡು ಮಕ್ಕಳು ಇದ್ದಾರೆ, ಬರಿ ಮಹಿಳೆಯರು ಇದ್ದಾರೆ. ಆದರಿಂದ ಕೂಡಲೇ ಅಕ್ರಮ ಮದ್ಯ ಸಾಗಾಟ ತಡೆಯಬೇಕೆಂದು ಅಧಿಕಾರಿಗೆ ಸೂಚಿಸಿದರು.ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಸ್ಕಾಂ 2, ತಾಪಂ 55 ಸೇರಿದಂತೆ ಒಟ್ಟು 57 ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ ವಸತಿ, ನಿವೇಶನಕ್ಕೆ ಸಂಬಂಧ ಪಟ್ಟ ಅರ್ಜಿ ಹೆಚ್ಚು. ತಾಪಂ ಇಒ ಜಿ.ಪರಮೇಶ್ವರ, ಬಿಇಒ ಮಂಗಳಾ ಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರದೀಪ್ಕುಮಾರ, ಎಡಿ ವೀರಣ್ಣ ನಾಯ್ಕ, ಪಿಡಿಒ ರಫಿ ಸೇರಿದಂತೆ ಎಲ್ಲ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.