ಸಾರಾಂಶ
ಗದಗ: ಜಿಲ್ಲೆಯಲ್ಲಿ ಪ್ರಭುವಿನೆಡೆಗೆ ಪ್ರಭುತ್ವ ಎಂಬ ವಿನೂತನ ಕಾರ್ಯಕ್ರಮ ಆ.15 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಚಾಲನೆ ನೀಡಿದ್ದಾರೆ. ಪ್ರಭುವಿನೆಡೆಗೆ ಪ್ರಭುತ್ವದಲ್ಲಿ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಶಿಷ್ಟ ವಿನೂತನ ಕಾರ್ಯಕ್ರಮ ಪ್ರಭುವಿನೆಡೆಗೆ ಕಾರ್ಯಕ್ರಮವಾಗಿದೆ. ಜಿಲ್ಲಾ ಕ್ರೀಡಾಂಗಣ ಸೇರಿದಂತೆ ನಗರದಲ್ಲಿ ಮೂರು ಕಡೆ ಪ್ರ.ಪ್ರ.ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ ಈ ಯಂತ್ರದ ಮೂಲಕ ಬಟನ್ ಒತ್ತಿ ಹೇಳಿಕೊಳ್ಳುವ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮ ಮೇಲ್ವಿಚಾರಣೆಗಾಗಿ ಈಗಾಗಲೇ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಅವರನ್ನು ಕಾರ್ಯಕ್ರಮದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿಲಾಗಿದ್ದು, ಅವರು ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದ ಮೇಲುಸ್ತುವಾರಿ ಮಾಡಲಿದ್ದಾರೆ. ಎಲ್ಲ ಇಲಾಖೆ ಅಧಿಕಾರಿಗಳು ಪ್ರ.ಪ್ರ ದಲ್ಲಿ ದಾಖಲಾದ ದೂರುಗಳಿಗೆ ಪರಿಹಾರ ನೀಡಿ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.ಪ್ರಭುವಿನಡೆಗೆ ಪ್ರಭುತ್ವ ಕಾರ್ಯಕ್ರಮ ಆರಂಭಿಕವಾಗಿ 10 ಅಂಶಗಳನ್ನು ಒಳಗೊಂಡಂತೆ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ ಒದಗಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ಸಹಾಯ, ತುರ್ತು ವೈದ್ಯಕೀಯ ಸೇವೆ, ಅಕ್ರಮ ಮದ್ಯ ಮಾರಾಟ, ರಸ್ತೆ ಸುರಕ್ಷತೆ ಕ್ರಮ, ಕಾನೂನು ಬಾಹಿರ ಹಾಗೂ ಸಾಮಾಜಿಕ ವಿದ್ರೋಹ ಚಟುವಟಿಕೆ ವಿರುದ್ಧ ಕ್ರಮ, ಜಮೀನು ಹಕ್ಕು ಪತ್ರ , ಪಿಂಚಣಿ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತು ಪಂಚಾಯತಿಗಳ ಕೆಲ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ. ಸಂಬಂಧಿತ ಇಲಾಖಾಧಿಕಾರಿಗಳು ದೂರು ಅಥವಾ ಸಮಸ್ಯೆ ದಾಖಲಾದ ತಕ್ಷಣ ಅದರ ಪರಿಹಾರಕ್ಕೆ ಕಾರ್ಯ ಪ್ರವೃತ್ತರಾಗಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದ ಇಲ್ಲ. ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.ಸಾರ್ವಜನಿಕರಿಂದ ಪ್ರ.ಪ್ರ ಯಂತ್ರಗಳ ಮೂಲಕ ಸ್ವೀಕೃತವಾದ ಸಮಸ್ಯೆ, ದೂರು ಪರಿಶೀಲಿಸಿ 7 ದಿನಗಳೊಳಗಾಗಿ ಪರಿಹಾರ ಸೂಚಿಸಬೇಕು. ದೂರುದಾರರಿಗೆ ಸ್ಪಷ್ಟ ಉತ್ತರ ನೀಡಬೇಕು. ಹಾರಿಕೆ ಉತ್ತರಕ್ಕೆ ಅವಕಾಶವಿಲ್ಲ. ದೂರಿಗೆ ಪರಿಹಾರ ಇಲ್ಲದಿದ್ದಲ್ಲಿ ಸಕಾರಣದೊಂದಿಗೆ ಉತ್ತರ ನೀಡುವುದು. ಮುಂದಿನ ದಿನಮಾನಗಳಲ್ಲಿ ಮಾಸಿಕವಾಗಿ ಪ್ರಗತಿ ನಡೆಸಲಾಗುವುದು. ಇಲಾಖಾ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕು. ಜತೆಗೆ ಜಿಲ್ಲಾ ನೋಡಲ್ ಅಧಿಕಾರಿಗೆ ಪ್ರಗತಿ ವರದಿ ಸಭೆಗೂ ಮುಂಚಿತವಾಗಿ ಸಲ್ಲಿಸಬೇಕು. ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪ್ರ.ಪ್ರ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರ ಮಹಾತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದ್ದು, ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಹಾಗೂ ಸಾರ್ವಜನಿಕರಿಗೆ ತ್ವರಿತವಾಗಿ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರ.ಪ್ರ ಜಾರಿಗೊಳಿಸಲಾಗಿದೆ. ಇದರ ಯಶಸ್ಸಿಗೆ ಅಧಿಕಾರಿ ವರ್ಗ ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು, ನಿರ್ಲಕ್ಷ್ಯ, ವಿಳಂಬ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ ಎಂದರು.ಜಿಲ್ಲಾ ನೋಡಲ್ ಅಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಪ್ರ.ಪ್ರ ಕಾರ್ಯಕ್ರಮ ಜಾರಿ ಆರಂಭದಿಂದ ಈವರೆಗೆ ಒಟ್ಟು 13 ಸಮಸ್ಯೆ, ದೂರು ದಾಖಲಾಗಿದ್ದು ಸಂಬಂಧಿತ ಇಲಾಖೆಗಳಿಗೆ ಪರಿಹಾರಕ್ಕೆ ಸೂಚಿಸಲಾಗಿದೆ. ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಸಭೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಾರ್ವಜನಿಕರು ಸಮಸ್ಯೆ ತಿಳಿಸಿದ್ದು, ಶೀಘ್ರ ಪರಿಹಾರ ದೊರಕಿಸಿ ವರದಿ ನೀಡುವಂತೆ ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಉಪವಿಭಾಗಾಧಿಕಾರಿ ಗಂಗಪ್ಪ.ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಆಹಾರ ಇಲಾಖೆ ಉಪನಿರ್ದೇಶಕ ರಮೇಶ, ಡಿಡಿಎಲ್ ಆರ್. ರುದ್ರಣ್ಣಗೌಡ, ಡಿಡಿಪಿಐ ಆರ್.ಎಸ್. ಬುರುಡಿ, ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ವಸ್ತ್ರದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.