ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸದಸ್ಯರು ಅಭಿಪ್ರಾಯ ಮಂಡಿಸಿದ ಮೇರೆಗೆ ಈಗಾಗಲೇ ಕರೆದ ಟೆಂಡರ್‌ಗಳಿಗೆ ಅನುಮೋದನೆ ನೀಡದೇ ಮುಂದಿನ ವಾರ ಗುತ್ತಿಗೆದಾರರ ಸಭೆ ಕರೆದು ಹಿಂದಿನ ಕಾಮಗಾರಿಗಳ ಬಗ್ಗೆ ಚರ್ಚಿಸಿ ಹೊಸ ಟೆಂಡರ್‌ಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ₹೨೦೮ ಲಕ್ಷಕ್ಕೆ ತಯಾರಿಸಿದ ಕ್ರಿಯಾಯೋಜನೆಯ ವಿವರ ತಿಳಿಸಿದರು.ಕುಡಿಯುವ ನೀರು, ಮಳೆ ನೀರು ಕೊಯ್ಲು, ಜಲಮೂಲಗಳ ಪುನಶ್ಚೇತನ ಮತ್ತು ನೀರಿನ ಮರು ಬಳಕೆ ಒಳಗೊಂಡಂತೆ ಶೇ.೩೦ರಷ್ಟು ₹೬೨.೪ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಶೇ.೩೦ ₹೬೨.೪ ಲಕ್ಷ, ಎಲ್ಲ 23 ವಾರ್ಡ್‌ಗಳಲ್ಲಿ ರಸ್ತೆ, ಸೇತುವೆ ಮತ್ತು ಪಾದಚಾರಿ ಮಾರ್ಗಗಳು ಶೇ.೪೦, ₹೧೧೩.೮೦ ಲಕ್ಷ ಅಂದಾಜು ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.
ಸದಸ್ಯ ನೀಲಪ್ಪ ನಾಯಕ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಎಲ್ಲ ವಾರ್ಡ್‌ಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಅಭಿಪ್ರಾಯ ಪಡೆದು ಮುಂದಿನ ಕಾಮಗಾರಿ ಕೈಗೊಳ್ಳಬೇಕು. ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ನಿಗದಿತ ಸಮಯದಲ್ಲಿ ಆಗುವಂತೆ ಕ್ರಮ ಕೈಗೊಳ್ಳಬೇಕು. ಬಾಡಿಗೆ ನೀಡದೇ ಇರುವವರ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಸದಸ್ಯ ದೇವೇಂದ್ರ ಚವ್ಹಾಣ ಅವರು, ವಾರ್ಡ್‌ಗಳಲ್ಲಿ ಕಳಪೆ ಕಾಮಗಾರಿಯಾಗಿದ್ದರೆ ಅಂತಹ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ವಿಜಯ ನಾಯಕ, ಹಿಂದಿನ ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಂಡಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಅಂತಹ ಗುತ್ತಿಗೆದಾರರಿಗೆ ಟೆಂಡರ್ ಕೊಡಬೇಕು ಎಂದರು.
ಸದಸ್ಯೆ ಶೋಭಾಂಗಿಣಿ ಗಾಯಕವಾಡ ಮಾತನಾಡಿ, 17ನೇ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಬೇಕೆಂದು ಸಭೆಯ ಗಮನಕ್ಕೆ ತಂದರು. ಸದಸ್ಯ ವಿಜಯ ನಾಯಕ ಅವರು ಜಾಲಿಹಾಳ ತಾಂಡಾದಲ್ಲಿ ಶುದ್ಧ ಕುಡಿಯುವ ಘಟಕದಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎಂದಾಗ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪುರಸಭೆ ವ್ಯಾಪ್ತಿಯ ಶುದ್ಧ ಕುಡಿವ ನೀರಿನ ಘಟಕಗಳನ್ನು ಈಗಾಗಲೇ ಒಂದು ಸಲ ದುರಸ್ತಿ ಮಾಡಿಸಲಾಗಿದೆ. ಒಂದು ವೇಳೆ ಶುದ್ಧ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದರೆ ದುರಸ್ತಿ ಮಾಡಿಸಿ ಜನರಿಗೆ ಶುದ್ಧ ನೀರು ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಸದಸ್ಯರಾದ ಪ್ರವೀಣ ಪೂಜಾರಿ, ರಾಜು ಲಮಾಣಿ, ರವಿ ನಾಯ್ಕೋಡಿ ಇತರರು ಪುರಸಭೆಯಿಂದ ಸ್ವಾಗತ ಕಮಾನುಗಳನ್ನು ಪ್ರಮುಖ ರಸ್ತೆಗಳಲ್ಲಿ ನಿರ್ಮಾಣ ಮಾಡಬೇಕು ಎಂದು ಸಭೆಯ ಗಮನಕ್ಕೆ ತಂದರು. ವ್ಯವಸ್ಥಾಪಕ ಸುರೇಶ ಬಾಗೇವಾಡಿ ಅವರು, ವಿಕಲಚೇತನರಿಗೆ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಕರೆಯಲಾಗಿದೆ. 13 ಜನರಿಗೆ ಹೊಲಿಗೆ ಯಂತ್ರ ಕೊಡಬೇಕಿದೆ. 11 ಅರ್ಜಿಗಳು ಬಂದಿವೆ. ವ್ಹೀಲ್ ಚೇರ್ ೭ ಜನರಿಗೆ ವಿತರಣೆಗೆ ಅನುದಾನ ಇದೆ. ಇದಕ್ಕೆ 3 ಅರ್ಜಿಗಳು ಬಂದಿವೆ. ವೃತ್ತಿ ನಿರತ ವಕೀಲರಿಗೆ ಪುಸ್ತಕ ಖರೀದಿಗೆ ಸಹಾಯಧನ ಯೋಜನೆ ಅಡಿಯಲ್ಲಿ 3 ಅರ್ಜಿ ಬಂದಿವೆ. ಶ್ರವಣಸಾಧನ ಮೂವರು ಜನರಿಗೆ ನೀಡಲು ಅನುದಾನವಿದೆ. ಇದಕ್ಕೆ ಒಂದು ಅರ್ಜಿ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಸವೇಶ್ವರ ವೃತ್ತಕ್ಕೆ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸುವುದು ಶೋಭೆ ತರುವುದಿಲ್ಲ. ಶ್ರದ್ಧಾಂಜಲಿ ಬ್ಯಾನರ್ ಕಟ್ಟಲು ನಿಗದಿಪಡಿಸಿದ ಜಾಗೆಯಲ್ಲಿ ಈ ಬ್ಯಾನರ್ ಕಟ್ಟುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಸಭೆಯ ಗಮನಕ್ಕೆ ತಂದರು. ಪ್ರವಾಸಿ ಮಂದಿರದ ಮುಂಭಾಗದ ಪ್ರಮುಖ ರಸ್ತೆಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣಕ್ಕೆ, ಅಂಗವಿಕಲ ಒಕ್ಕೂಟದ ಸಮುದಾಯ ಭವನಕ್ಕೆ ಜಾಗ ಗುರುತಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ೨೦೨೫-೨೬ನೇ ಸಾಲಿಗೆ ೧೫ನೇ ಹಣಕಾಸು ಅನುದಾನ, ಎಸ್‌ಎಫ್‌ಸಿ ಮುಕ್ತನಿಧಿ ಯೋಜನೆ, ಎಸ್ಸಿ, ಎಸ್ಪಿ, ಟಿಎಸ್ಪಿ ವಿವಿಧ ಅಭಿವೃದ್ಧಿ ಯೋಜನೆಗಳಡಿಯಲ್ಲಿ ಸರ್ಕಾರದಿಂದ ಹಂಚಿಕೆಯಾಗಿರುವ ಅನುದಾನಕ್ಕೆ ಕ್ರಿಯಾಯೋಜನೆಗೆ ಸಭೆ ಅನುಮೋದನೆ ನೀಡಿತು.ಸಭೆಯಲ್ಲಿ ಸದಸ್ಯರಾದ ರಜಾಕಬಿ ಬಮ್ಮನಹಳ್ಳಿ, ನಜೀರಅಹ್ಮದ ಗಣಿ, ಅಬ್ದುಲರಹಿಮಾನ ಚೌಧರಿ, ರವಿ ನಾಯ್ಕೋಡಿ, ಗೀತಾ ಬಾಗೇವಾಡಿ, ಅನ್ನಪೂರ್ಣ ಕಲ್ಯಾಣಿ, ಪರಜಾನ ಚೌಧರಿ, ಲಕ್ಷ್ಮೀಬಾಯಿ ಬೆಲ್ಲದ, ಪುರಸಭೆ ಅಭಿಯಂತರಾದ ಮಹಾದೇವ ಜಬಂಗಿ, ಸಂತೋಷ ಗಿಡ್ಡಸಣ್ಣನವರ, ವಿಜಯಕುಮಾರ ವಂದಾಲ, ಗೀತಾಂಜಲಿ ದಾಸರ, ರೇಣುಕಾ ಭಂಡಾರಿ ಇತರರು ಇದ್ದರು.