ರಸ್ತೆ ಗುಂಡಿ ಮುಚ್ಚಲು ನಿರ್ಲಕ್ಷಿಸಿದರೆ ಅಧಿಕಾರಿಗಳು ಅಮಾನತು: ಡಿಸಿಎಂ

| Published : Sep 09 2024, 01:35 AM IST

ರಸ್ತೆ ಗುಂಡಿ ಮುಚ್ಚಲು ನಿರ್ಲಕ್ಷಿಸಿದರೆ ಅಧಿಕಾರಿಗಳು ಅಮಾನತು: ಡಿಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ನಿರ್ಲಕ್ಷಿಸಿದರೆ ಎಷ್ಟು ಬಿಬಿಎಂಪಿ ಅಧಿಕಾರಿಗಳು ಅಮಾನತುಗೊಳ್ಳುತ್ತಾರೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಈಗಾಗಲೇ ನೀಡಲಾದ ಗಡುವಿನ ಒಳಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸುವ ಮತ್ತು ಬೇಜವಾಬ್ದಾರಿ ತೋರುವ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಬಿಎಂಪಿಯ ಐಪಿಪಿ ಕಚೇರಿಯಲ್ಲಿ ಭಾನುವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದಕ್ಕೆ ಸೆ.15ರವರೆಗೆ ಗಡುವು ನೀಡಲಾಗಿದೆ. ರಸ್ತೆ ಗುಂಡಿ ವಿಚಾರವಾಗಿ ಸಾರ್ವಜನಿಕರಿಂದ ಮತ್ತೆ ದೂರು ಬಂದರೆ ಇದಕ್ಕೆ ಜವಾಬ್ದಾರಿ ಆಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಷ್ಟು ಜನ ಅಮಾನತುಗೊಳ್ಳುತ್ತಾರೋ ಗೊತ್ತಿಲ್ಲ ಎಂದರು.

ಪಾಲಿಕೆಯ ಪ್ರತಿ ಅಧಿಕಾರಿಗಳು ಎಷ್ಟೇ ದೊಡ್ಡವರಿದ್ದರೂ ಪ್ರತಿಯೊಬ್ಬರೂ ರಸ್ತೆಯಲ್ಲಿ ನಿಂತು ಈ ಸಮಸ್ಯೆ ಬಗೆಹರಿಸಬೇಕು. ವಾರ್ಡ್‌ಗಳಲ್ಲಿ ಅಧಿಕಾರಿಗಳೇ ಮುಂದೆ ನಿಂತು ಗುಂಡಿ ಮುಚ್ಚುವ ಕೆಲಸ ಮಾಡಿಸಬೇಕು ಎಂದು ನಿರ್ದೇಶಿಸಿದರು.

ಸೆಪ್ಟೆಂಬರ್‌ನಲ್ಲಿ ಅಕಾಲಿಕ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಜಾಗರೂಕರಾಗಿರಬೇಕು. ಮಳೆ ನೀರು ನಿಲ್ಲುವ ಹಾಗೂ ಮನೆಗಳಿಗೆ ನುಗ್ಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು. ಮಳೆಗೆ ಬೀಳಬಹುದಾದ ಮರಗಳನ್ನು ಮೇಲ್ಭಾಗದಲ್ಲಿ ಕತ್ತರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ವಿದೇಶ ಪ್ರವಾಸ ಕೈಗೊಳ್ಳಲಾಗಿದ್ದು, ವಾಪಸ್‌ ಬಂದ ಬಳಿಕ ಸ್ವತಃ ತಾವೇ ನಗರ ಪ್ರದಕ್ಷಿಣೆ ನಡೆಸಿ ರಸ್ತೆಗಳ ಪರಿಸ್ಥಿತಿ ಅವಲೋಕನ ಮಾಡುವೆ ಎಂದು ಸ್ಪಷ್ಟಪಡಿಸಿದರು.ಶಾಲೆಯಲ್ಲಿ ಸ್ವಚ್ಛತಾ ಪ್ರತಿಜ್ಞೆ

ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸಿ 100 ವರ್ಷಗಳು ಪೂರೈಸಿದೆ. ಹೀಗಾಗಿ, ಬೆಂಗಳೂರು ನಗರದ ಎಲ್ಲಾ ಶಾಲೆಗಳಲ್ಲಿ ಅ.2ರ ಗಾಂಧಿ ಜಯಂತಿಯಂದು ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಮಾಡಬೇಕು. ಆ ಮೂಲಕ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.