ಅಕ್ರಮ ಮರಳು ದಾಸ್ತಾನು ಸ್ಥಳಕ್ಕೆ ಅಧಿಕಾರಿಗಳ ಭೇಟಿ

| Published : Mar 05 2025, 12:34 AM IST

ಸಾರಾಂಶ

ಕುಂದಗೋಳದಲ್ಲಿ ಅಕ್ರಮ ಮರಳು ದಂಧೆ‌ ಜೋರು ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಮಂಗಳವಾರ ಪ್ರಕಟಿಸಿದ್ದರಿಂದ ವರದಿ ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೈಜ ಸ್ಥಿತಿ ಅವಲೋಕನ ಮಾಡಿದರು.

ಕುಂದಗೋಳ: ತಾಲೂಕಿನ ಯರಗುಪ್ಪಿ, ರೊಟ್ಟಿಗವಾಡ,‌ ಕೊಡ್ಲಿವಾಡ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ದಾಸ್ತಾನು ‌ಮಾಡಿದ ಸ್ಥಳಕ್ಕೆಸೋಮವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

"ಕುಂದಗೋಳದಲ್ಲಿ ಅಕ್ರಮ ಮರಳು ದಂಧೆ‌ ಜೋರು " ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಮಂಗಳವಾರ ಪ್ರಕಟಿಸಿದ್ದರಿಂದ ವರದಿ ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೈಜ ಸ್ಥಿತಿ ಅವಲೋಕನ ಮಾಡಿದರು.

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿಂದು ಪಾಟೀಲ ಹಾಗೂ ತಾಲೂಕು ಆಡಳಿತ ಕೆಲ ಅಧಿಕಾರಿಗಳು ಅಕ್ರಮವಾಗಿ ಮರಳು ದಾಸ್ತಾನು ಮಾಡಿದ ಒಟ್ಟು 7 ಜನರಿಗೆ ನೋಟಿಸ್ ನೀಡಿದ್ದಾರೆ. ಈ ಹಿಂದೆ ನೀಡಿದ ನೋಟಿಸ್‌ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ನೊಟೀಸ್ ಜಾರಿಯಾಗಿವೆ. ರೊಟ್ಟಿಗವಾಡ ಗ್ರಾಮದ ಈರಪ್ಪ ಕುರಿ, ಮಹಮ್ಮದ್ ಬುಡಖಾನವರ, ಪರಶುರಾಮ ಕುರಿ, ಈರಪ್ಪ ಈರಗಾರ, ಗಂಗಪ್ಪ ಭರದ್ವಾಡ, ಫಕ್ಕೀರಗೌಡ್ರ ಕರೇಪ್ಪಗೌಡ್ರ,‌ ಮಾಂತೇಶ ಕಬ್ಬೇರಹಳ್ಳಿ,‌ ನಾಗಯ್ಯ ಹಿರೇಮಠ, ಸಿದ್ದಪ್ಪ ಬಾರಕೇರ,‌ ಪ್ರಶಾಂತಗೌಡ ಮರಿಗೌಡ್ರ, ಬಸನಗೌಡ ಕಬ್ಬೇರಹಳ್ಳಿ, ಮಂಜುನಾಥ ಕಬನೂರ, ಅಜೀತ ನೀರಗೋಣಿ ಹಾಗೂ ಯರಗುಪ್ಪಿ ಗ್ರಾಮದ ಈರಪ್ಪ ಉಮಚಗಿ ಸೇರಿ ಸುಮಾರು 15ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಮಾಹಿತಿ ‌ನೀಡಿದರು.

ದಾಸ್ತಾನು ಮಾಡಿದ ಮರಳು ಬಳಕೆ ಮಾಡದಂತೆ‌ ಸೂಚಿಸಿ, ಬಳಕೆ, ಸಾಗಾಟ ಮಾಡಿದರೆ ಮುಂದಿನ ಕಾನೂನು ಕ್ರಮಕ್ಕೆ ತಾವೇ ಹೊಣೆಗಾರರಾಗಿತ್ತೀರಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿಂದು ಪಾಟೀಲ ಎಚ್ಚರಿಕೆ ನೀಡಿದರು.

ಈ ಸಮಯದಲ್ಲಿ ‌ರೊಟ್ಟಿಗವಾಡ‌ ರೈತ ಗಂಗಾಧರ ಭರದ್ವಾಡ ಅಧಿಕಾರಿಗಳ ಮುಂದೆ, "ನಮ್ಮ ಜಮೀನಿನ ಬಳಿ ಹಳ್ಳ ಇರುವುದರಿಂದ ಮರಳು ತುಂಬಿದ ವಾಹನಗಳು ನಮ್ಮ ಜಮೀನಿನಲ್ಲೇ ಸಂಚರಿಸುತ್ತಿವೆ. ಈ ಬಗ್ಗೆ ಕೇಳಿದರೆ ನಾವು ಸಂಬಂಧಿಸಿದ ‌ಇಲಾಖೆಗೆ ಮಾಮೂಲು ನೀಡುತ್ತೇವೆ ಎಂದು ನಮ್ಮನ್ನು ಹೆದರಿಸುತ್ತಾರೆ ಮತ್ತು ‌ಪ್ರಭಾವಿ ರಾಜಕಾರಣಿಗಳ ಹೆಸರು ಹೇಳುತ್ತಾರೆ. ರಾತ್ರೋ ರಾತ್ರಿ ಉಸುಕು ಹೇರುತ್ತಾರೆ. ಇವರು ಹೀಗೆ ಮಾಡುತ್ತಿರುವುದರಿಂದ ಅಂತರ್ಜಲ ಕಡಿಮೆ ಆಗಿ ಸರಿಯಾಗಿ ಬೆಳೆ‌ ಬರುತ್ತಿಲ್ಲ " ಎಂದು ಅಳಲು ತೋಡಿಕೊಂಡರು.

ಈ ವೇಳೆ ಮಾಧ್ಯಮದವರೊಂದಿಗೆ ಗಣಿ ಮತ್ತು ಭೂ ಇಲಾಖೆಯ ಅಧಿಕಾರಿ ಬಿಂದು ಪಾಟೀಲ ಮಾತನಾಡಿ, ಈ ರೀತಿ ಹಳ್ಳದ ಮರಳನ್ನು ಹಳ್ಳದಿಂದ‌ ಪರವಾನಗಿ ಇಲ್ಲದೆ ಸಾಗಾಟ ಮಾಡುವುದು ತಪ್ಪು. ಇಲ್ಲಿ‌ ಬಹಳ ದಿನಗಳಿಂದ ಈ ಕೆಲಸ ನಡೆಯುತ್ತಿದೆ. ಇನ್ನು ಮುಂದೆ ಯಾರಾದರೂ ಮರಳು ಸಾಗಿಸಿದರೆ ನೋಟಿಸ್ ‌ನೀಡಿ ಮುಂದಿನ ಕ್ರಮ‌ ಜರುಗಿಸುತ್ತೇನೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಶಿ ಹೋಬಳಿಯ ಶಿವಾನಂದ ಕರಿಗಾರ, ಯರಗುಪ್ಪಿ ಗ್ರಾಮ ಲೆಕ್ಕಾಧಿಕಾರಿ, ರಾಕೇಶ ಕೆ. ಹಾಗೂ ರೊಟ್ಟಿಗವಾಡ ಗ್ರಾಮ ಲೆಕ್ಕಾಧಿಕಾರಿ, ರುಸ್ತುಂ ಸಣ್ಣಮನಿ ಸೇರಿದಂತೆ ಇತರರು ಇದ್ದರು.