ಸಾರಾಂಶ
ಸವಣೂರು: ತವರಮೆಳ್ಳಿಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ₹4 ಕೋಟಿ ಅನುದಾನ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಶಾಸಕ ಯಾಸೀರ್‌ಅಹ್ಮದಖಾನ ಪಠಾಣ ಟಿಎಚ್‌ಒ ಡಾ. ಚಂದ್ರಕಲಾ ಜೆ. ಅವರನ್ನು ತರಾಟೆಗೆ ತೆಗೆದುಕೊಂಡರು.ಮಂಗಳವಾರ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಮಂಡಿಸುತ್ತಿದ್ದ ಟಿಎಚ್‌ಒ ಡಾ. ಚಂದ್ರಕಲಾ ಜೆ. ಅವರು ಇಲಾಖೆ ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ ಶಾಸಕ ಪಠಾಣ ಮಾತನಾಡಿ, ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳಾಗಿ ನೀವು ಗ್ರಾಮೀಣ ಭಾಗದ ಆಸ್ಪತ್ರೆಗಳ ಅಭಿವೃದ್ಧಿಗೆ ಅನುದಾನ ನೀಡಿದರೂ ಮಾಹಿತಿ ಇಲ್ಲ ಎಂದರು.
ತಾಲೂಕಿನಲ್ಲಿ ಏನು ಕೆಲಸ ಮಾಡುತ್ತಿದ್ದಿರಿ. ಕೇವಲ ಗೂಗಲ್ ಮೀಟಿಂಗ್‌ಗೆ ಮಾತ್ರ ಸೀಮಿತವಾಗಿದ್ದಿರಿ. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರ ಕೊರತೆ ಹೆಚ್ಚಾಗಿದೆ. ಯಾವ ಗ್ರಾಮದಲ್ಲಿನ ಆಸ್ಪತ್ರೆಗೆ ವೈದ್ಯರ ಅವಶ್ಯಕತೆ ಇದೆ ಎಂದು ಪ್ರಶ್ನಿಸುತ್ತಿದ್ದಂತೆ. ಆರೋಗ್ಯಾಧಿಕಾರಿ ಡಾ. ಚಂದ್ರಕಲಾ ಮಾಹಿತಿ ನೀಡಿ, ಕಾರಡಗಿ, ಹುರಳಿಕುಪ್ಪಿ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಕೊರತೆ ಇದೆ ಎನ್ನುತ್ತಿದ್ದಂತೆ, ರೋಗಿಗಳ ರೋಗಕ್ಕೆ ತಕ್ಕಂತೆ ಔಷಧಿಗಳನ್ನು ನೀಡುವುದು ನೆನಪಿದೆಯಾ? ಹಾಗಾದರೆ ಕಾರಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದ ಮೂರು ದಿನ ವೈದ್ಯರಾಗಿ ಸಾರ್ವಜನಿಕರಿಗೆ ಸೇವೆಯನ್ನು ನೀಡಿ ಉಳಿದ ಮೂರು ದಿನ ಟಿಎಚ್‌ಒ ಕರ್ತವ್ಯವನ್ನು ನಿರ್ವಹಿಸಿ. ನೀವು ಸೇವೆ ಸಲ್ಲಿಸುವ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡುತ್ತೇನೆ ಎಂದು ಗುಡುಗಿದರು.ಕೃಷಿ ಇಲಾಖೆ ಅಧಿಕಾರಿ ಸವಿತಾ ಚಕ್ರಸಾಲಿ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗಿ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದಾರೆ. ಬಿತ್ತನೆಗೆ ಅವಶ್ಯವಾಗಿರುವ ರಸಗೊಬ್ಬರಗಳ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ 12 ಅಂಗಡಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಒಂದು ಅಂಗಡಿಗೆ ರಸಗೊಬ್ಬರಗಳ ಮಾರಾಟ ಸ್ಥಗಿತಗೊಳಿಸಲು ನೋಟಿಸ್ ನೀಡಲಾಗಿದೆ ಎಂದರು.ಶಾಸಕ ಮಾತನಾಡಿ, ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕಾಗಿ ನಿತ್ಯ ರೈತರು ಅಲೆದಾಡುತ್ತಿದ್ದಾರೆ. ಈಗಾಗಲೇ ಮೇಲಧಿಕಾರಿಗಳಿಗೆ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರ ಪೂರೈಸುವಂತೆ ತಿಳಿಸಲಾಗಿದೆ. ರಸಗೊಬ್ಬರ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕಳೆದ ಸಭೆಯಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಭೆ ಮಾಡಿ ರಸಗೊಬ್ಬರಕ್ಕೆ ಲಿಂಕ್ ಗೊಬ್ಬರ ನೀಡಬಾರದು. ರೈತರಿಗೆ ಅವಶ್ಯವಿರುವ ಗೊಬ್ಬರವನ್ನು ಮಾತ್ರ ಪೂರೈಸುವಂತೆ ತಾಕೀತು ಮಾಡಲಾಗಿತ್ತು. ಆದರೆ, ನಿರಂತರವಾಗಿ ಲಿಂಕ್ ಎಂದು ಜಿಂಕ್ ಗೊಬ್ಬರವನ್ನು ಒತ್ತಾಯದ ಮೂಲಕ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ತನಿಖೆ ಕೈಗೊಂಡು ಅಂತಹ ವ್ಯಾಪಾರಸ್ಥರ ಪರವಾನಗಿ ರದ್ದು ಮಾಡಿ ಎಂದರು.ಕೆಡಿಪಿ ಸಭೆಗೆ ನೂತನವಾಗಿ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಗೊಂಡ ಸದಸ್ಯರನ್ನು ತಾಲೂಕು ಪಂಚಾಯಿತಿ ವತಿಯಿಂದ ಶಾಸಕ ಯಾಸೀರ್‌ಅಹ್ಮದಖಾನ್ ಪಠಾಣ ಅವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಭರತರಾಜ್ ಕೆ.ಎನ್., ಇಒ ಪಿ.ಎಸ್. ಸಿಡೇನೂರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಭಾಷ ಮಜ್ಜಗಿ, ಕೆಡಿಪಿ ನಾಮನಿರ್ದೇಶನ ಸದಸ್ಯರಾದ ನವಿನ ಬಂಡಿವಡ್ಡರ, ರವಿ ಕರಿಗಾರ, ಭಾಷಾಸಾಬ ಅಂಗಡಿ, ಪಂಚಪ್ಪ ತೊಳಕೊಪ್ಪ, ಮಾಲಿ, ನಾಗಪ್ಪ ತಿಪ್ಪಕ್ಕನವರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.