ಸಾರಾಂಶ
ಧಾರವಾಡ:
ವಿವಿಧ ಇಲಾಖೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಮಾ. 31ರೊಳಗೆ ಪೂರ್ಣ ಬಳಕೆ ಆಗದೆ, ಉಳಿದರೆ ಸಂಬಂಧಿಸಿದ ಇಲಾಖೆ ಅಧಿಕಾರಿಯನ್ನು ಜವಾಬ್ದಾರರನ್ನಾಗಿಸಿ ಕ್ರಮ ತೆಗೆದುಕೊಳ್ಳುವುದಾಗಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗವಾರ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು, ಕೆಲವು ಇಲಾಖೆಗಳು ನೀಡಿರುವ ಮಾಹಿತಿಯಂತೆ ಅನುದಾನ ಬಳಕೆಯಾಗಿಲ್ಲ. ನಿಯಮಾವಳಿ ಪ್ರಕಾರ ಅನುಮೋದಿತ ಕ್ರಿಯಾಯೋಜನೆ ಮತ್ತು ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಎಚ್ಚರಿಸಿದರು.
ಹೊಸ ವಿಚಾರಗಳೊಂದಿಗೆ ಬನ್ನಿ:ಹಲವಾರು ವರ್ಷಗಳಿಂದ ಇಲಾಖೆಗಳಲ್ಲಿರುವ ಅಧಿಕಾರಿಗಳು ಹೊಸ ವಿಚಾರಗಳೊಂದಿಗೆ ಸಭೆಗೆ ಬರಬೇಕು. ತಮ್ಮ ಜ್ಞಾನ ಮತ್ತು ಅನುಭವ ಬಳಸಿ, ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಹೊಸ ಯೋಜನೆ, ಕಾರ್ಯಕ್ರಮ ತರಲು ಸರ್ಕಾರಕ್ಕೆ ಸಲಹೆ ನೀಡಬೇಕೆಂದ ಸಚಿವರು, ಅಧಿಕಾರಿಗಳು ಕಚೇರಿಯಲ್ಲಿ ಕಾಲ ಕಳೆಯದೆ ಕ್ಷೇತ್ರ ಭೇಟಿ ಮೂಲಕ ಗ್ರಾಮ, ಕಾಮಗಾರಿ ಸ್ಥಳ, ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪ್ರತಿ ಅಧಿಕಾರಿ ದಿನನಿತ್ಯ ನಿರ್ವಹಿಸುವ ಕಚೇರಿ ಕಾರ್ಯಗಳ ಕುರಿತು ಡೈರಿ ಬರೆಯಬೇಕು. ಮುಂದಿನ ಸಭೆಗೆ ಡೈರಿ ತರಬೇಕೆಂದು ಇದೇ ವೇಳೆ ಸೂಚಿಸಿದರು.
ಶಾಲೆ ಬಿಟ್ಟವರ ಮಾಹಿತಿ:ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಶಾಲೆ ಬಿಟ್ಟ ಮಕ್ಕಳ ಮಾಹಿತಿ ಸಂಗ್ರಹಿಸಬೇಕು. ಅದಕ್ಕೆ ಕಾರಣ ತಿಳಿದು ಅವರ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡಬೇಕು ಅಥವಾ ಕೌಶಲ್ಯಾಭಿವೃದ್ಧಿ ನೀಡಿ ಉದ್ಯೋಗಸ್ಥರನ್ನಾಗಿ ಮಾಡಬೇಕು ಎಂಬ ಸಲಹೆ ನೀಡಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮುಂಬರುವ ಬಜೆಟ್‌ದಲ್ಲಿ ಜಿಲ್ಲೆಗೆ ಆದ್ಯತೆ ಸಿಗುವಂತೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಬೇಕು. ಗ್ರಾಮೀಣ ಕುಡಿಯುವ ನೀರು ಹಾಗೂ ಅವಳಿನಗರದ ಕುಡಿಯುವ ನೀರಿನ ಮುಖ್ಯ ಯೋಜನೆಗಳ ಕಾಮಗಾರಿ ಹೊಂದಿರುವ ಕಂಪನಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ಮಾಡುತ್ತಿಲ್ಲ. ಅವರ ನಿಧಾನಗತಿ ನೋಡಿದರೆ ಜೂನ್ ಒಳಗೆ ಕೆಲಸ ಆಗುವಂತೆ ಕಾಣುತ್ತಿಲ್ಲ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಂಪನಿ ಮುಖ್ಯಸ್ಥರ ಹಾಗೂ ಅಧಿಕಾರಿಗಳ ಸಭೆ ಜರುಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.ಆನೆವಾರಿಗೆ ಕರೀರಿ:
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ರೈತರ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದ್ದರೂ ಗಮನಿಸದೆ ಅಧಿಕಾರಿಗಳು, ಉತ್ತಮ ಬೆಳೆ ಇರುವ ಕೆಲವೆ ಕೆಲವು ತೋಟಗಳಲ್ಲಿ ಬೆಳೆ ಆನೆವಾರಿ ಮಾಡುತ್ತಾರೆ. ಅಲ್ಲಿ ಸಿಗುವ ಇಳುವರಿ ದಾಖಲಿಸುತ್ತಾರೆ. ಇದರಿಂದ ಶೇ. 90ರಷ್ಟು ರೈತರಿಗೆ ಹಾನಿ ಆಗುತ್ತದೆ. ಬೆಳೆ ಆನೆವಾರಿಗೆ ಬರುವಾಗ ರೈತರಿಗೆ, ಪ್ರಮುಖರಿಗೆ, ಜನಪ್ರತಿನಿಧಿಗಳಿಗೆ ತಿಳಿಸದೆ ಬರುತ್ತಾರೆ. ಆಯಾ ಮತಕ್ಷೇತ್ರದ ಶಾಸಕರಿಗೆ ಅವರ ಕ್ಷೇತ್ರದ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಅಧಿಕಾರಿಗಳು ತಪ್ಪದೇ ಮಾಹಿತಿ ನೀಡುವಂತೆ ತಾವು ನಿರ್ದೇಶನ ನೀಡಬೇಕೆಂದು ಉಸ್ತುವಾರಿ ಸಚಿವರಿಗೆ ತಿಳಿಸಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಅವಳಿನಗರದ ನಿರಂತರ ನೀರು ಯೋಜನೆ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕಾರ್ಮಿಕರನ್ನು ಬಳಸಿ, ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಸಭೆಗೆ ಇಲಾಖೆ ಮಾಹಿತಿ:ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತ ಡಿಡಿಪಿಐ ಎಸ್.ಎಸ್. ಕೆಳದಿಮಠ, ಕೃಷಿ ಇಲಾಖೆ ಕುರಿತು ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಕುರಿತು ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಪಶುಪಾಲನಾ ಇಲಾಖೆ ಕಾರ್ಯಚಟುವಟಿಕೆ ಕುರಿತು ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ಮಾಹಿತಿ ನೀಡಿದರು.
ಜಿಪಂ ಸಿಇಒ ಭುವನೇಶ ಪಾಟೀಲ ಹಾಗೂ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಡಾ. ಎಚ್.ಎಚ್. ಕುಕುನೂರ ಇಲಾಖಾ ಮಾಹಿತಿ ನೀಡಿದರು.ಸಭೆಯಲ್ಲಿ ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ ವೇದಿಕೆಯಲ್ಲಿದ್ದರು.ಶೂನ್ಯ ಸಾಧಕರಿಗೆ ಸನ್ಮಾನ:
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುದಾನಿತ ಹಾಗೂ ಎರಡು ಅನುದಾನ ರಹಿತ ಶಾಲೆಗಳಲ್ಲಿನ ಒಬ್ಬ ವಿದ್ಯಾರ್ಥಿಯೂ ಉತ್ತೀರ್ಣಯಾಗಿಲ್ಲ. ಹೀಗೆ ಶೂನ್ಯ ಸಾಧನೆ ಮಾಡಿದ ಮತ್ತು ಈ ವರ್ಷ ಶೂನ್ಯ ಸಾಧನೆ ಮಾಡುವ ಶಾಲೆಗಳ ಶಿಕ್ಷಕರಿಗೆ ಜಿಲ್ಲಾಮಟ್ಟ, ರಾಷ್ಟ್ರೀಯ ಹಬ್ಬಗಳಲ್ಲಿ ಸನ್ಮಾನಿಸುವ ಮೂಲಕ ಅವರ ಆತ್ಮಸಾಕ್ಷಿ ಪರೀಕ್ಷಿಸಿಕೊಳ್ಳಲಿ. ಇಂತಹ ಶಾಲೆ, ಶಿಕ್ಷಕರನ್ನು ಮುಂದಿನ ದಿನಗಳಲ್ಲಿ ಸಹಿಸುವುದಿಲ್ಲ ಎಂದು ಸಭೆಯಲ್ಲಿ ಸಚಿವ ಸಂತೋಷ ಲಾಡ್ ಎಚ್ಚರಿಸಿದರು.