ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಿ

| Published : Nov 24 2025, 03:15 AM IST

ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ನಿಶಾಮಕ ದಳದವರು ಪಾರ್ಕಿಂಗ್ ಮತ್ತು ಅಡುಗೆ ಮಾಡುವ ಸ್ಥಳಗಳಲ್ಲಿ ತಮ್ಮ ಒಂದೊಂದು ವಾಹನ ನಿಲ್ಲಿಸಬೇಕು.

ಕೊಪ್ಪಳ: ಹನುಮ ಮಾಲಾ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹೇಳಿದರು.

ಅವರು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ.2 ಮತ್ತು 3 ರಂದು ಜರುಗುವ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಹಾಗೂ ಅಂಜನಾದ್ರಿ ಬೆಟ್ಟದಲ್ಲಿ ಜರುಗಲಿರುವ ಪವಮಾನ ಹೋಮ ಯಾಗ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಚರ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶೇಷವಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ, ಜೆಸ್ಕಾಂ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಲೋಕೋಪಯೋಗಿ ಇಲಾಖೆಗಳ ಪಾತ್ರ ಬಹಳ ಇದ್ದು, ಯಾವುದೇ ಒಂದು ಇಲಾಖೆಯು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸದಿದ್ದರೆ ನಮ್ಮ ಪೊಲೀಸ್ ಇಲಾಖೆಗೆ ಹೊಡೆತ ಬೀಳುತ್ತದೆ. ಹಾಗಾಗಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಾರಿಗೆ ಅಧಿಕಾರಿಗಳು ಟ್ರಾಫಿಕ್ ಜಾಮ್ ಆಗದಂತೆ ನಿಗದಿಪಡಿಸಿದ ಮಾರ್ಗಗಳಲ್ಲಿ ತಮ್ಮ ಬಸ್‌ಗಳನ್ನು ಸಂಚರಿಸುವಂತೆ ನೋಡಿಕೊಳ್ಳಬೇಕು. ಲೋಕೋಪಯೋಗಿ ಇಲಾಖೆಯವರು ಪಾರ್ಕಿಂಗ್ ಸ್ಥಳ, ವಾಚ್ ಟವರ್ ಹಾಗೂ ಊಟದ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕುವುದರ ಜತೆಗೆ ಅಲ್ಲಲ್ಲಿ ಇರುವ ರಸ್ತೆ ತಗ್ಗು ಗುಂಡಿ ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಅಗ್ನಿಶಾಮಕ ದಳದವರು ಪಾರ್ಕಿಂಗ್ ಮತ್ತು ಅಡುಗೆ ಮಾಡುವ ಸ್ಥಳಗಳಲ್ಲಿ ತಮ್ಮ ಒಂದೊಂದು ವಾಹನ ನಿಲ್ಲಿಸಬೇಕು. ಬೆಟ್ಟದ ಮೇಲೆ ತಮ್ಮ ಸಿಬ್ಬಂದಿಗಳು ಇಕ್ವಿಫ್‌ಮೆಂಟ್ ಜತೆಗೆ ಸಿದ್ದರಿರಬೇಕು. ಬೆಟ್ಟ ಹತ್ತುವಾಗ ಯಾರಿಗಾದರೂ ಸಮಸ್ಯೆಗಳಾದರೆ ತಕ್ಷಣ ಅವರ ಸಹಾಯಕ್ಕೆ ತಾವು ಧಾವಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನಗಳ ಟ್ರಾಫಿಕ್ ಕಂಟ್ರೋಲ್ ಮಾಡುವ ಜವಾಬ್ದಾರಿ ಸೂಕ್ತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಹನುಮಮಾಲಾ ಕಾರ್ಯಕ್ರಮಕ್ಕೆ ನಮ್ಮ ಪೊಲೀಸ್ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೆ ಉಳಿದುಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಸೇರಿದಂತೆ ಇತರೆ ವಸತಿ ನಿಲಯಗಳಲ್ಲಿ ಎರಡು ದಿನ ಉಳಿದುಕೊಳ್ಳಲು ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕು. ಡಿ.2 ಮತ್ತು 3 ರಂದು ಮಧ್ಯ ಮಾರಾಟ ನಿಷೇಧ ಮಾಡಬೇಕೆಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲರೂ ಸೇರಿ ಹನುಮಮಾಲಾ ಕಾರ್ಯಕ್ರಮ ಯಶಸ್ವಿಯಾಗಿ ಮಾಡೋಣ ಎಂದು ಹೇಳಿದರು.

ಈ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್. ಹೇಮಂತಕುಮಾರ್, ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ, ಗಂಗಾವತಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ, ಕೊಪ್ಪಳ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶಿವಯ್ಯ, ಗಂಗಾವತಿ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕ ರಾಜಶೇಖರ, ಅರಣ್ಯ ಇಲಾಖೆಯ ಎಸಿಎಫ್. ಮುಲ್ಲಾ ಎ.ಎಚ್., ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಎಸ್. ಹಿರೇಮಠ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.