ಮತ ಹಾಕದವರ ವಿರುದ್ಧ ಸೇಡು ತೀರಿಸಿಕೊಳ್ಳಲು ತೈಲ ಬೆಲೆ ಏರಿಕೆ: ಸಂಸದ ಬಿ.ವೈ.ರಾಘವೇಂದ್ರ

| Published : Jun 17 2024, 01:32 AM IST

ಮತ ಹಾಕದವರ ವಿರುದ್ಧ ಸೇಡು ತೀರಿಸಿಕೊಳ್ಳಲು ತೈಲ ಬೆಲೆ ಏರಿಕೆ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬರಗಾಲದ ಛಾಯೆ ಇದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಒದಗಿಸುವ ಬದಲು ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಲೆಕ್ಕಾಚಾರವನ್ನು ಜನ ತಿರಸ್ಕರಿಸಿದ ಕಾರಣ ಈಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ ಹೊರಟಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರಿಹಾಯ್ದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರ ಹಾಗೂ ಜನರ ಬಗ್ಗೆ ಅವಹೇಳನಕರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಈಗ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ ಎಂದು ಕಿಡಿಕಾರಿದರು.

ತೈಲ ಬೆಲೆ ಏರಿಕೆ ಮಾಡಿರುವುದು ಮಾತ್ರವಲ್ಲ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಮಾತುಗಳನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜನರು ಕಾಂಗ್ರೆಸ್‌ನಿಂದ ಪ್ರಯೋಜನ ಪಡೆದು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ. ತೈಲ ದರ ಏರಿಕೆಯಿಂದಾಗಿ ಜನರು ತೊಂದರೆಗೆ ಸಿಲುಕಿದ್ದಾರೆ. ಇದು ರೈತರು, ಬಡ ಮಧ್ಯಮ ವರ್ಗದವರು, ಮೀನುಗಾರರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಕೆಎಸ್ಆರ್‌ಟಿಸಿ ಪ್ರಯಾಣ ದರ ಹೆಚ್ಚಳವಾಗಲಿದೆ. ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತು ಕೊಳ್ಳುತ್ತಿದೆ. ಹಣದ ಸೋರಿಕೆಯನ್ನು ತಡೆಯದೆ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ ಈಗ ತೈಲ ದರವನ್ನು ಹೆಚ್ಚಿಸಿದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಕ್ಷೇತ್ರಕ್ಕೆ ನಯಾ ಪೈಸೆ ಅನುದಾನ ಬಂದಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಬರಗಾಲದ ಛಾಯೆ ಇದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಒದಗಿಸುವ ಬದಲು ಜನರ ಮೇಲೆ ಬರೆ ಎಳೆಯುತ್ತಿದೆ. ಈ ಮೂಲಕ ತನಗೆ ಮತ ಹಾಕದ ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಈಗಲೂ ‌ಕಾಲ‌ ಮಿಂಚಿಲ್ಲ. ತಕ್ಷಣವೇ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಲಿ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ಮತ್ತಿತರರು ಇದ್ದರು.ರಾಜ್ಯದಲ್ಲಿರುವುದು ಸುಲಿಗೆ ಸರ್ಕಾರ: ಆರಗ ಆಕ್ರೋಶ

ಶಿವಮೊಗ್ಗ: ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವುದು ಸುಲಿಗೆಕೋರ ಸರ್ಕಾರ. ಕಾಂಗ್ರೆಸ್‌ ನಾಯಕರ ಅಧಿಕಾರದ ದಾಹಕ್ಕೆ ಜನರ ಸುಲಿಗೆಗೆ ಮುಂದಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಯಿಂದ ಜನಸಾಮಾನ್ಯರ ಬದುಕು ಕಷ್ಟವಾಗುತ್ತಿದೆ. ದಿನ ನಿತ್ಯದ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಾಗಲಿದೆ. ರೈತರ ಪಹಣಿ ಸೇರಿದಂತೆ ಪ್ರತಿಯೊಂದರ ದರವನ್ನೂ ಸರ್ಕಾರ ಹೆಚ್ಚಿಸಿದೆ. ಇನ್ನು ರಾಜ್ಯದಿಂದ ಪ್ರಮುಖ ಬಂಡವಾಳ ಹೂಡಿಕೆದಾರರು ಹಿಂದಿರುಗುತ್ತಿದ್ದಾರೆ. ದಿಢೀರ್‌ ವಿದ್ಯುತ್ ದರ ಹೆಚ್ಚಳದಿಂದ ಪ್ರಬಲ ಉದ್ಯಮಿಗಳು ರಾಜ್ಯವನ್ನು ತೊರೆಯುತ್ತಿದ್ದಾರೆ. ಒಟ್ಟಾರೆ ಈ ಕಾಂಗ್ರೆಸ್ ಯಾವಾಗ ತೊಲಗುತ್ತದೆ ಎಂದು ‌ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.