ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆಜೆಸ್ಟಿಕ್ ಸಮೀಪದ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಕಾರಿಡಾರ್‌ನ ಎರಡನೇ ಹಂತದ ಲೋಕಾರ್ಪಣೆ ಬುಧವಾರ ನೆರವೇರಲಿದೆ.ಈ ಕಾರಿಡಾರ್‌ನಿಂದ ಗಾಂಧಿನಗರ, ಮೆಜೆಸ್ಟಿಕ್, ಬೆಂಗಳೂರು ನಗರ ರೈಲ್ವೆ ನಿಲ್ದಾಣ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ ಹಾಗೂ ಮಾಗಡಿ ರಸ್ತೆ ಹೀಗೆ ಬೆಂಗಳೂರು ನಗರ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರಮುಖ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶಗಳ ನಡುವಿನ ಏಕೈಕ ಕೊಂಡಿಯಾಗಲಿದೆ.
ಯೋಜನೆಗೆ ಭೂಸ್ವಾಧೀನಕ್ಕಾಗಿ ₹165.65 ಕೋಟಿ ವೆಚ್ಚ ಮಾಡಲಾಗಿದೆ. ರೈಲ್ವೆ ಕೆಳಸೇತುವೆಗಾಗಿ ಚೆನ್ನೈ ಹಳಿಗಳ ಕೆಳಗೆ ವಾಹನ ಸಂಚಾರಕ್ಕಾಗಿ 4 ಆರ್‌ಸಿಸಿ ಬಾಕ್ಸ್‌ಗಳು, ತುಮಕೂರು ಹಳಿಗಳ ಕೆಳಗೆ 4 ಆರ್‌ಸಿಸಿ ಬಾಕ್ಸ್‌ಗಳ ಅಳವಡಿಕೆ ಮತ್ತು ಪಾದಚಾರಿಗಳಿಗಾಗಿ ಪ್ರತ್ಯೇಕ 2 ಆರ್‌ಸಿಸಿ ಬಾಕ್ಸ್ ನಿರ್ಮಾಣವನ್ನು ₹87.60 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.ಬಿಬಿಎಂಪಿ ವತಿಯಿಂದ 2 ಫ್ಲೈಓವರ್ ಹಾಗೂ ಒಂದು ಕೆಳಸೇತುವೆಯ ನಿರ್ಮಾಣ, ಪಾದಚಾರಿ ಮೇಲು ಸೇತುವೆ ನಿರ್ಮಾಣ, ನೆಲ ಮಟ್ಟದ ರಸ್ತೆಗಳು, ನೆಲಮಟ್ಟದಲ್ಲಿ ಸಣ್ಣ ಸಣ್ಣ ದ್ವೀಪಗಳನ್ನು ನಿರ್ಮಿಸಿ ಸಸ್ಯ, ತೋಟಗಾರಿಕೆ ಕೈಗೊಳ್ಳಲಾಗಿದೆ, ಇದ್ದಕ್ಕಾಗಿ ₹102.84 ಕೋಟಿ ವೆಚ್ಚ ಮಾಡಲಾಗಿದೆ.ರಾಜೀವ್ ಕಂಚಿನ ಪ್ರತಿಮೆ ಅನಾವರಣ
ಇದೇ ವೇಳೆ ಸುಭಾಷ್ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗಿರುವ ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆ ಹಾಗೂ ಸಮಗ್ರ ಜಂಕ್ಷನ್ ಅಭಿವೃದ್ಧಿ ಮಾಡಲಾಗಿದ್ದು ಲೋಕಾರ್ಪಣೆ ಮಾಡಲಾಗುತ್ತಿದೆ.ಒಟ್ಟು ಮೊತ್ತ ₹2.65 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಜಂಕ್ಷನ್ ಅಭಿವೃದ್ದಿಗೆ ₹1.40 ಕೋಟಿ, ಕಂಚಿನ ಪ್ರತಿಮೆಗೆ ₹1.25 ಕೋಟಿ ವೆಚ್ಚವಾಗಿದೆ. ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆಯ ಎತ್ತರ 15 ಅಡಿಗಳು ಇದೆ. ಈ ಜಂಕ್ಷನ್‌ನಲ್ಲಿ ಒಟ್ಟು 4 ರಸ್ತೆಗಳು ಹಾದು ಹೋಗುತ್ತಿದ್ದು, ಮುಖ್ಯವಾಗಿ ರಾಜಾಜಿನಗರ ಹಾಗೂ ಮಲ್ಲೇಶ್ವರ ಕಡೆಗೆ ಸಂಪರ್ಕ ಕಲ್ಪಿಸಿಕೊಡುತ್ತದೆ. ಜಂಕ್ಷನ್‌ನಲ್ಲಿ ಪಾದಚಾರಿಗಳು ಹಾಗೂ ಬಸ್ ತಂಗುದಾಣಕ್ಕೆ ಬರುವ ಪ್ರಯಾಣಿಕರು ವಿಶ್ರಮಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಸುಸಜ್ಜಿತ ಆಸನಗಳ ವ್ಯವಸ್ಥೆ, ಮನರಂಜಿಸುವ ಕಾರಂಜಿಗಳು, ಆಕರ್ಷಕ ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ಜಂಕ್ಷನ್ ಸುತ್ತಮುತ್ತ ಹಸಿರು ಗಿಡಗಳನ್ನು ನೆಡಲಾಗಿದೆ.