ಒಕ್ಕಲಿಗ ನಾಯಕತ್ವ ಯಾರ ಸ್ವತ್ತಲ್ಲ: ಸಂಸದ ಸುರೇಶ್

| Published : Apr 13 2024, 01:05 AM IST

ಸಾರಾಂಶ

ರಾಮನಗರ: ಒಕ್ಕಲಿಗ ನಾಯಕತ್ವ ಯಾರ ಸ್ವತ್ತೂ ಅಲ್ಲ. ಒಕ್ಕಲಿಗರು ಸ್ವಾಭಿಮಾನಿಗಳು. ಯಾವಾಗ ಯಾರನ್ನು ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ರಾಮನಗರ: ಒಕ್ಕಲಿಗ ನಾಯಕತ್ವ ಯಾರ ಸ್ವತ್ತೂ ಅಲ್ಲ. ಒಕ್ಕಲಿಗರು ಸ್ವಾಭಿಮಾನಿಗಳು. ಯಾವಾಗ ಯಾರನ್ನು ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ರಾಮನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್ ಅವರನ್ನು ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ಅವರ ಮಧ್ಯೆ ಒಕ್ಕಲಿಗ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತಿದೆಯೇ ಎಂದು ಕೇಳಿದಾಗ, ಒಕ್ಕಲಿಗ ನಾಯಕತ್ವ ಯಾರ ಸ್ವತ್ತೂ ಅಲ್ಲ. ಡಿ.ಕೆ.ಶಿವಕುಮಾರ್ ಅವರು ತಾನು ಮಾತ್ರ ಒಕ್ಕಲಿಗರ ನಾಯಕ ಎಂಬ ಭಾವನೆಯನ್ನೇ ಇಟ್ಟುಕೊಂಡಿಲ್ಲ ಎಂದರು.

ಮೈತ್ರಿ ಸರ್ಕಾರ ಬೀಳಿಸುವ ಸಂದರ್ಭದಲ್ಲಿ ಯಾರು ನೇತೃತ್ವ ವಹಿಸಿದ್ದರೋ ಅವರನ್ನೇ ಕರೆದುಕೊಂಡು ಮಠಕ್ಕೆ ಹೋಗಿರುವ ವಿಚಾರವನ್ನು ಮಾತ್ರ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದಾರೆ. ಒಕ್ಕಲಿಗರು ಸ್ವಾಭಿಮಾನಿಗಳು. ಯಾವಾಗ ಯಾರನ್ನು ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ. ಡಿ.ಕೆ.ಶಿವಕುಮಾರ್ ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದು, ಎಲ್ಲಾ ಸಮುದಾಯದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ. ಸಮುದಾಯ ಕೂಡ ಅವರ ಬೆಂಬಲಕ್ಕೆ ಇದೆ ಎಂದು ತಿಳಿಸಿದರು.

ಗೌಡರ ಕುಟುಂಬ ಮೊದಲಿನಿಂದಲೂ ಹಗೆತನ ಸಾಧಿಸುತ್ತಿದೆ:

ಒಕ್ಕಲಿಗರು ಈ ಬಾರಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ರಾಜಕೀಯವಾಗಿ ಅವರು ಹೇಳುತ್ತಾರೆ. ಅವರು ಹೇಳುವುದೆಲ್ಲಾ ಸತ್ಯವೇ? ಅವರು ಪ್ರತಿ ಹಂತದಲ್ಲೂ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ದೇವೇಗೌಡರ ಕುಟುಂಬ ಬಹಳ ಹಿಂದಿನಿಂದಲೂ ಡಿ.ಕೆ.ಶಿವಕುಮಾರ್ ಅವರ ಮೇಲೆ ಹಗೆತನ ಸಾಧಿಸುತ್ತಿದೆ. ನಮಗೆ ಆ ಭಾವನೆ ಇಲ್ಲ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಾವು ಅವರಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಅವರು ಚುನಾವಣೆ ಸಮಯದಲ್ಲಿ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ನಾನು ಅದಕ್ಕೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ವೈಯಕ್ತಿಕ ಟೀಕೆ ಮಾಡುತ್ತಿರುವ ಬಗ್ಗೆ ಚುನಾವಣೆ ನಂತರ ಚರ್ಚೆಗೆ ಕರೆಯಲಿ ನಾನು ಚರ್ಚಿಸಲು ಸಿದ್ಧ ಎಂದು ತಿಳಿಸಿದರು.

ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ಚರ್ಚೆ ಮಾಡಲಿ:

ರಾಜ್ಯದ ಏಕೈಕ ಸಂಸದರನ್ನು ಮಣಿಸಲು ಕೇಂದ್ರ ಬಿಜೆಪಿ ನಾಯಕರು ಆಗಮಿಸುತ್ತಿರುವ ಬಗ್ಗೆ ಕೇಳಿದಾಗ, ದೇವರು ಅವರಿಗೆ ಒಳ್ಳೆಯದು ಮಾಡಲಿ. ಅವರು ರಾಜ್ಯಕ್ಕೆ ಬರುವಾಗ ಕರ್ನಾಟಕ ಹಾಗೂ ಕನ್ನಡಿಗರಿಗೆ ಕೊಟ್ಟಿರುವ ಪಟ್ಟಿಯನ್ನು ತಂದು ಮಾತನಾಡಲಿ. ನಾನು ತೆರಿಗೆ ವಿಚಾರವಾಗಿ ಎತ್ತಿರುವ ಪ್ರಶ್ನೆ ಬಗ್ಗೆ ಮಾತನಾಡಲಿ. ನಂತರ ನಾನು ಉತ್ತರ ನೀಡುತ್ತೇನೆ ಎಂದರು.

ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳುವುದೊಂದೆ ಬಿಜೆಪಿಯವರ ಬಳಿ ಇರುವ ಅಸ್ತ್ರ. ಅವರಿಗೆ ಬೇರೆ ಅಸ್ತ್ರವಿಲ್ಲ. ಇಲ್ಲಿ ಪ್ರಮುಖವಾಗಿ ರಾಜ್ಯದ ಜನ ಕಳೆದ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆ, ಅವರ ಜೀವನ, ಬದುಕು ಬಹಳ ಮುಖ್ಯ. ವಿಶೇಷವಾಗಿ ಯುವಕರು, ರೈತರ ಭವಿಷ್ಯ ಅತಂತ್ರವಾಗಿದೆ. ಜಿಎಸ್ ಟಿ ಹೊರೆ, ನಿರುದ್ಯೋಗ ಸಮಸ್ಯೆ, ರೈತರು ಬಳಸುವ ರಸಗೊಬ್ಬರ, ಯಂತ್ರೋಪಕರಣ ಬೆಲೆ ಏರಿಕೆಯಾಗಿದೆ. ಇದರಿಂದ ಜನರು ಬಹಳ ಕಷ್ಟಪಟ್ಟು ಜೀವನ ನಡೆಸುವಂತಾಗಿದ್ದು, ಈ ವಿಚಾರಗಳನ್ನು ಜನ ಗಂಭೀರವಾಗಿ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಕೆಲಸ ಇಲ್ಲದವರು ದಿನಾ ಟ್ವೀಟ್ ಮಾಡಿಕೊಂಡು ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ. ಜನ ನನ್ನನ್ನು ಕೆಲಸಗಾರ ಎಂದು ಪರಿಗಣಿಸಿದ್ದು, ನನ್ನ ಕೆಲಸಕ್ಕೆ ನಾನು ಕೂಲಿ ಕೇಳುತ್ತಿದ್ದೇನೆ. ನಾನು ಅವರಂತೆ ದಿನನಿತ್ಯ ಪಿಟಿಷನ್ ಬರೆಯುತ್ತಾ ಕೂತಿಲ್ಲ ಎಂದರು.

ನನ್ನ ಅಭಿವೃದ್ಧಿ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ:

ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಕಳೆದ ಹತ್ತು ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ಧಿ ಹಾಗೂ ನನ್ನ ಜನಪರ ಕೆಲಸಗಳಿಗೆ ಕೂಲಿ ನೀಡಿ ಎಂದು ಮತದಾರರನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.

ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಜನ ಮಾತಾಡುತ್ತಿದ್ದಾರೆ. ಕಾರ್ಯಕರ್ತರು ಮನೆ, ಮನೆ ಪ್ರಚಾರಕ್ಕೆ ಹೋದ ಎಲ್ಲೆಡೆ ಪಕ್ಷಾತೀತವಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸೇರ್ಪಡೆ ಬಗ್ಗೆ ಕೇಳಿದಾಗ, “ಬೆಂಗಳೂರು ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಪಾಲಿಕೆ ಸದಸ್ಯರು, ಪಂಚಾಯ್ತಿ ಸದಸ್ಯರು, ಅಧ್ಯಕ್ಷರು ನನಗೆ ಹಾಗೂ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದರ ಜತೆಗೆ ಪಕ್ಷಾತೀತವಾಗಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

12ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಉದ್ಘಾಟಿಸಿದರು.