ಗೇಣಿದಾರರ ಪರ 2011ರ ಕಾನೂನು ಅನುಷ್ಠಾನಕ್ಕೆ ಒಕ್ಕಲು ರಕ್ಷಣಾ ವೇದಿಕೆ ಆಗ್ರಹ

| Published : Feb 06 2025, 11:45 PM IST

ಗೇಣಿದಾರರ ಪರ 2011ರ ಕಾನೂನು ಅನುಷ್ಠಾನಕ್ಕೆ ಒಕ್ಕಲು ರಕ್ಷಣಾ ವೇದಿಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗೇಣಿದಾರರ ಹಿತರಕ್ಷಣೆಗಾಗಿ 2011ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ತಕ್ಷಣ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗೇಣಿದಾರರ ಹಿತರಕ್ಷಣೆಗಾಗಿ 2011ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾನೂನನ್ನು ತಕ್ಷಣ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಬಗ್ಗೆ ವೇದಿಕೆಯು ಸುದ್ದಿಗೋಷ್ಠಿ ನಡೆಸಿ ಗೇಣಿದಾರು ಯಾನೆ ಒಕ್ಕಲುದಾರರ ಸಂಕಷ್ಟಗಳ ಬಗ್ಗೆ ವಿವರಗಳನ್ನು ನೀಡಿತು.

ಗೇಣಿದಾರರು ತಲೆಮಾರುಗಳಿಂದ ಅನುಭವಿಸಿಕೊಂಡು ಬಂದಿರುವ ಭೂಮಿಯ ದಾಖಲೆಗಳಲ್ಲಿ ಇನ್ನೂ ಮೂಲಿದಾರರು ಯಾನೆ ಧಣಿಗಳು ಹೆಸರು ಇರುವುದರಿಂದ, ಆ ಭೂಮಿಯ ಪರಿವರ್ತನೆ, ಅಡಮಾನ ಸಾಲ ಇತ್ಯಾದಿಗಳಿಗೆ ಗೇಣಿದಾರರಿಗೆ ತೊಂದರೆಯಾಗುತ್ತದೆ. ತಲೆಮಾರುಗಳೇ ಕಳೆದು ಹೋಗಿರುವುದರಿಂದ ತಮ್ಮ ಭೂಮಿಯ ಮೂಲಿದಾರರು ಯಾರು ಎಂಬುದೇ ಬಹುತೇಕ ಗೇಣಿದಾರರಿಗೂ ಮಾಹಿತಿ ಇಲ್ಲ. ಇದರಿಂದ ಗೇಣಿದಾರರು ತಮ್ಮ ಭೂಮಿಯನ್ನು ಪರಿಪೂರ್ಣ ಅನುಭವಿಸುವ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಎಂ.ಕೆ. ಯಶೋಧರ ಹೇಳಿದರು.

ಈ ಹಿನ್ನೆಲೆಯಲ್ಲಿ ಅನೇಕ ಹೋರಾಟದ ನಂತರ ಸರ್ಕಾರದ ಗೇಣಿದಾರರಿಗೆ 500ರಿಂದ 1000 ವರ್ಷದೊಳಗಿನ ಗೇಣಿಯನ್ನು ಪರಿಹಾರ ರೂಪದಲ್ಲಿ ಮೂಲಿದಾರರಿಗೆ ನೀಡುವ ಸೂಚನೆಯನ್ನು ಗೇಣಿದಾರರು ಒಪ್ಪಿದ್ದು, ಇದನ್ನು ಒಂದು ವಿಧೇಯಕವಾಗಿ ವಿಧಾನಸಭೆ-ವಿಧಾನಪರಿಷತ್ತುಗಳಲ್ಲಿ ಅಂಗೀಕರಿಸಿ, ರಾಷ್ಟ್ರಪತಿಯವರ ಅನುಮೋದನೆಯನ್ನು ಪಡೆದು, 2011ರಲ್ಲೇ ಕಾನೂನಾಗಿ ಪರಿಗಣಿಸಿ, 2012 ರಿಂದಲೇ ಜಾರಿಗೆ ಬರುವಂತೆ ಗಜೆಟ್ ನೋಟಿಫಿಕೇಶನ್ ಮಾಡಲಾಗಿತ್ತು ಎಂದು ತಿಳಿಸಿದರು.ಆದರೆ ಕೆಲವು ಮೂಲಿದಾರರು ತಮಗೆ ನೀಡುವ ಪರಿಹಾರದ ಮೊತ್ತ ಅತೀ ಕನಿಷ್ಠವೆಂದು ಹೈಕೋರ್ಟ್ ಮೂಲಕ ಕಾನೂನು ಜಾರಿಯಾಗದಂತೆ ತಡೆ ಕೋರಿದರು. ಆದರೆ ನ್ಯಾಯಾಧೀಶ ಕೃಷ್ಣ ದೀಕ್ಷಿತರು ಗೇಣಿದಾರರ ಪರವಾಗಿ ತೀರ್ಪು ನೀಡಿದರು. ಇದನ್ನು ಪ್ರಶ್ನಿಸಿ ಮೂಲಿದಾರರು ದ್ವಿಸದಸ್ಯ ಪೀಠದಲ್ಲಿ ಪುನಃ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಆದ್ದರಿಂದ 13 ವರ್ಷ ಕಳೆದರೂ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಗೇಣಿದಾರರ ಹಿತ ರಕ್ಷಣೆ ಮಾಡಬೇಕು ಎಂದು ಯಶೋಧರ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಂದೇಶ್‌ ಪ್ರಭು, ಖಜಾಂಚಿ ಶಂಕರ್ ಪ್ರಭು, ಉಡುಪಿ ಜಿಲ್ಲಾ ಪ್ರತಿನಿಧಿ ಎಸ್.ಎಸ್. ಶೇಟ್, ಕಾರ್ಯಕಾರಿ ಸದಸ್ಯರಾದ ರೊನಾಲ್ಡ್ ಡಿಸಿಲ್ವ, ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

---------------9ರಂದು ಮಾಹಿತಿ - ಸದಸ್ಯತ್ವ ಅಭಿಯಾನ

ಉಡುಪಿ ಜಿಲ್ಲೆಯೊಂದರಲ್ಲಿಯೇ ಸುಮಾರು 1 ಲಕ್ಷಕ್ಕೂ ಅಧಿಕ ಗೇಣದಾರರಿದ್ದಾರೆ. ಅವರೆಲ್ಲರ ಹಿತಕ್ಕಾಗಿ ಈ ಹೋರಾಟದ ಹಿನ್ನೆಲೆಯಲ್ಲಿ ಫೆ.9ರಂದು ಬೆಳಗ್ಗೆ 10 ಗಂಟೆಯಿಂದ ಉಡುಪಿಯ ಬಳಕೆದಾರರ ವೇದಿಕೆಯಲ್ಲಿ ಜಿಲ್ಲೆಯ ಮೂಲಗೇಣಿದಾರರಿಗೆ ಮಾಹಿತಿ ಮತ್ತು ಸದಸ್ಯತ್ವ ಅಭಿಯಾನವನ್ನು ಆಯೋಜಿಲಾಗಿದೆ. ಇದರಲ್ಲಿ ಹೆಚ್ಚಿನ ಗೇಣಿದಾರರು ಭಾಗವಹಿಸಬೇಕು ಎಂದು ಜಿಲ್ಲೆಯ ಸಕ್ರಿಯ ಕಾರ್ಯಕರ್ತ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.