ಸಾರಾಂಶ
ಮಂಗಳವಾರ ರಾತ್ರಿಯಿಂದಲೇ ಕಾರ್ಯಾರಂಭವಾಗಿದೆ ಎಂದು ವಾಯವ್ಯ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಸೆ. 3ರಿಂದ ಈ ಹಿಂದಿನಂತೆಯೇ ಕಾರ್ಯಾಚರಣೆ ನಡೆಯಲಿದೆ. ಫ್ಲೈ ಓವರ್ ಕಾಮಗಾರಿಯಿಂದ ಅಲ್ಲಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ತೆರೆದು ಬಸ್ ಸಂಚಾರಕ್ಕೆ ಅನುವು ಮಾಡಲಾಗಿತ್ತು.
ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ 4 ತಿಂಗಳು ಬಂದ್ ಆಗಿದ್ದ ಇಲ್ಲಿಯ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಹಳೆಯ ಹೊಸ ಬಸ್ ನಿಲ್ದಾಣ ಸೆ. 3ರಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಬಸ್ ಸಂಚಾರ ಆರಂಭದ ಹಿನ್ನೆಲೆಯಲ್ಲಿ ಕಳೆದ ಕೆಲದಿನಗಳಿಂದ ಇಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.
ಮಂಗಳವಾರ ರಾತ್ರಿಯಿಂದಲೇ ಕಾರ್ಯಾರಂಭವಾಗಿದೆ ಎಂದು ವಾಯವ್ಯ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಸೆ. 3ರಿಂದ ಈ ಹಿಂದಿನಂತೆಯೇ ಕಾರ್ಯಾಚರಣೆ ನಡೆಯಲಿದೆ. ಫ್ಲೈ ಓವರ್ ಕಾಮಗಾರಿಯಿಂದ ಅಲ್ಲಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ತೆರೆದು ಬಸ್ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಯಾವ ಬಸ್ ಎಲ್ಲಿಂದ ಹೊರಡುತ್ತದೆ ಎಂದು ತಿಳಿಯದೇ ಹೈರಾಣಾಗುತ್ತಿದ್ದರು. ಇದೀಗ ಹಳೆಯ ಹೊಸ ಬಸ್ ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡುತ್ತಿರುವುದು ಪ್ರಯಾಣಿಕರನ್ನು ನಿರಾಳರಾಗುವಂತೆ ಮಾಡಿದೆ.ಈ ಬಸ್ ನಿಲ್ದಾಣದಿಂದ ಉಪನಗರ ಸಾರಿಗೆ, ಹುಬ್ಬಳ್ಳಿ-ಧಾರವಾಡ, ಬಿಆರ್‌ಟಿಎಸ್ ಬಸ್‌ಗಳು ಸಂಚರಿಸಲಿವೆ. ಅಲ್ಲದೇ, ಗೋಕುಲ ರಸ್ತೆ ಬಸ್ ನಿಲ್ದಾಣ, ಹೊಸೂರ ಬಸ್ ನಿಲ್ದಾಣಕ್ಕೆ ತೆರಳುವ ಬಸ್‌ಗಳು ಸಹ ಇಲ್ಲಿ ನಿಲುಗಡೆಯಾಗಿ ಮುಂದೆ ಸಂಚರಿಸಲಿವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಟಿ ವಿಭಾಗದ ಅಧಿಕಾರಿ ಸಿದ್ಧಲಿಂಗೇಶ್ ತಿಳಿಸಿದ್ದಾರೆ.
ಫ್ಲೈಓವರ್ ಕಥೆಯೇನು?: ಇದೀಗ ಈ ಭಾಗದಲ್ಲಿ ನಡೆಯುತ್ತಿದ್ದ ಫ್ಲೈಓವರ್‌ನ ಅಪಾಯಕಾರಿ ಕೆಲಸಗಳು ಮುಕ್ತಾಯವಾಗಿರುವ ಕಾರಣ ಹಳೆ ಬಸ್ ನಿಲ್ದಾಣದಿಂದ ಸಂಚರಿಸಲಿವೆ. ಆದರೆ, ಫ್ಲೈಓವರ್ ಕಾಮಗಾರಿ ಇನ್ನು ಮುಂದುವರಿಯಲಿದೆ ಎಂದು ಪಿಡಬ್ಲುಡಿ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ)ದ ಮೂಲಗಳು ತಿಳಿಸಿವೆ.