ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಜಿಎಸ್ಟಿ ಪಾಲನ್ನು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಐಟಿಯು ಜಿಲ್ಲಾ ಸಮಿತಿಯವರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಜಿಎಸ್ಟಿ ಪಾಲು ನೀಡುವಲ್ಲಿ ಹಾಗೂ ಆಯಾ ರಾಜ್ಯಗಳಿಗೆ ನೀಡಬೇಕಾದ ಅನುದಾನಗಳನ್ನು ಕಡಿತಗೊಳಿಸುವುದು, ಅನುದಾನ ಕೊಡದೆ ಇರುವ ಮೂಲಕ ತನ್ನ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಕೇರಳದಲ್ಲಿರುವ ಎಡರಂಗ ಸರ್ಕಾರವನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಬೇಕೆಂದು ಕೇರಳ ರಾಜ್ಯವನ್ನು ಒಕ್ಕೂಟದ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಕಡೆಗಣಿಸಿದೆ. ಕೇರಳ ರಾಜ್ಯ ಸರ್ಕಾರವನ್ನೇ ಸಂಕಷ್ಟಕ್ಕೆ ದೂಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಇದನ್ನು ವಿರೋಧಿಸಿ, ಕೇರಳ ಸರ್ಕಾರ ಮತ್ತು ಜನತೆ ಸತತವಾಗಿ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತುತ್ತಿದ್ದಾರೆ. ಆದರೆ, ಮೋದಿ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಕೇರಳ ಇಂದು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ ಎಂದು ಅವರು ಆರೋಪಿಸಿದರು.ಇತ್ತೀಚೆಗೆ ವಯನಾಡಿನಲ್ಲಿ ನಡೆದ ಪ್ರಕೃತಿ ವಿಕೋಪ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಸ್ಥಿತಿ ಉಂಟು ಮಾಡಿದೆ. ಕೇರಳದ ಜನರ ಬದುಕು ಮತ್ತು ಅಭಿವೃದ್ಧಿಗೆ ಹಿನ್ನೆಡೆ ಉಂಟಾಗುವಂತೆ ಮೋದಿ ಸರ್ಕಾರ ವರ್ತಿಸುತ್ತಿದೆ. ಕೇರಳ ರಾಜ್ಯ ಜನರಿಗೆ ಸಾಮಾಜಿಕ ಭದ್ರತೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಕನಿಷ್ಠ ವೇತನ ನೀಡುವಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನವಲ್ಲಿದ್ದು, ಅಲ್ಲಿ 600 ರೂ. ಪ್ರತಿದಿನ ನೀಡಲಾಗುತ್ತಿದೆ. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರ ನೀಡಬೇಕಾದ ಅನುದಾನವನ್ನು ತಡೆಹಿಡಿಯಲಾಗಿದೆ ಎಂದು ಅವರು ದೂರಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜಿ. ಜಯರಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಜಿರಾವ್, ಖಜಾಂಚಿ ಎಂ. ಅಪ್ಪಣ್ಣ ಮೊದಲಾದವರು ಇದ್ದರು.