ತಮಿಳುನಾಡಿಗೆ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುವುದು ಕನ್ನಡಿಗರ ಹಕ್ಕು
ಕನ್ನಡಪ್ರಭ ವಾರ್ತೆ ಮೈಸೂರು
ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಲು ಆಗ್ರಹಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳವಾದ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು, ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿರುವ ಮೇಕೆದಾಟು ಯೋಜನೆಯಿಂದ ಸುಮಾರು 47 ಟಿಎಂಸಿ ನೀರನ್ನು ಸಂಗ್ರಹಿಸಿ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವುದು ಹಾಗೂ 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಗುರಿ ಇದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಡಿ.ಕೆ. ಶಿವಕುಮಾರ್ ಪಾದಯಾತ್ರೆ ನಡೆಸಿದ್ದು, ಈಗ ಅವರೇ ಮುಖ್ಯಮಂತ್ರಿ ಆಗಿರುವ ಕಾರಣ ಕೂಡಲೇ ಯೋಜನೆ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ತಮಿಳುನಾಡಿಗೆ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುವುದು ಕನ್ನಡಿಗರ ಹಕ್ಕು. ಬೇಸಿಗೆಯಲ್ಲಿ ಬೆಂಗಳೂರಿನ ನೀರಿನ ಸಮಸ್ಯೆಗೆ ಇದು ಶಾಶ್ವತ ಪರಿಹಾರವಾಗಲಿದ್ದು, ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣಕ್ಕೂ ಯಾವುದೇ ತೊಂದರೆಯಾಗುವುದಿಲ್ಲ. ಕರ್ನಾಟಕದಲ್ಲಿ ಈ ಯೋಜನೆ ರಾಜಕೀಯ ಅಸ್ತ್ರವಾಗುವುದು ಬೇಡ ಎಂದು ಅವರು ಆಗ್ರಹಿಸಿದರು.ತಮಿಳುನಾಡು ಸರ್ಕಾರ ಈ ಯೋಜನೆಯ ಡಿಪಿಆರ್ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಈ ಯೋಜನೆಗೆ ಆನುಮೋದನೆ ನೀಡುವ ಅಧಿಕಾರ ನ್ಯಾಯಾಲಯದ್ದಲ್ಲ. ಬದಲಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯದ್ದು ಎಂದು ತಿಳಿಸಿದೆ. ಹೀಗಾಗಿ ಕೂಡಲೇ ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್, ಮುಖಂಡರಾದ ನಂಜುಂಡ, ಹರೀಶ್, ಕಿರಣ, ಹೊನ್ನೇಗೌಡ, ತಾರಾ, ವತ್ಸಲಾ, ರಶ್ಮಿ ಸಿಂಗ್, ನಾಗರಾಜ್, ರವಿಗೌಡ, ಶೋಭಾ, ಸೋಮಶೇಖರ್, ಬೆಟ್ಟೇಗೌಡ, ಇಂದ್ರಮ್ಮ, ಶಶಿಕಲಾ, ದಿವ್ಯಾರಾಣಿ, ವಿಷ್ಣು, ಗಿರಿಜಾ, ಶಿವಕುಮಾರ್, ಮಹೇಂದ್ರ, ರವಿಕಾಂತ, ಹೇಮಾವತಿ ಮೊದಲಾದವರು ಇದ್ದರು.