ವಿಶೇಷ ಪೂಜೆಯೊಂದಿಗೆ 18ನೇ ಕ್ರಸ್ಟ್‌ಗೇಟ್‌ ತೆರವು ಕಾರ್ಯಾಚರಣೆ ಶುಕ್ರವಾರ ನಡೆಸಲಾಯಿತು.

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯವನ್ನು ತುಂಗಭದ್ರಾ ಮಂಡಳಿ ಪ್ರಾರಂಭಿಸಿದ್ದು, ವಿಶೇಷ ಪೂಜೆಯೊಂದಿಗೆ 18ನೇ ಕ್ರಸ್ಟ್‌ಗೇಟ್‌ ತೆರವು ಕಾರ್ಯಾಚರಣೆ ಶುಕ್ರವಾರ ನಡೆಸಲಾಯಿತು.

ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯದ ಗೇಟ್‌ ಅಳವಡಿಕೆ ಕಾರ್ಯದ ವಿಶೇಷ ಪೂಜೆ ನಡೆಸಲಾಯಿತು. ತುಂಗಭದ್ರಾ ಮಂಡಳಿ ಗೇಟ್‌ ನಿರ್ಮಾಣದ ಹೊಣೆಯನ್ನು ಗುಜರಾತ ಮೂಲದ ಕಂಪನಿಗೆ ವಹಿಸಲಾಗಿದೆ. ಈ ಕಂಪನಿಯ ನುರಿತ ತಜ್ಞರು ಹಾಗೂ ಕಾರ್ಮಿಕರನ್ನು ಬಳಸಿಕೊಂಡು ಗೇಟ್ ಅಳವಡಿಕೆ ನಡೆಸಲಾಗುತ್ತಿದೆ.

15 ಗೇಟ್‌ ಸಿದ್ಧ:

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳನ್ನು ತೆರವುಗೊಳಿಸಿ ಹಂತ ಹಂತವಾಗಿ ಹೊಸ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಈಗ ಜಲಾಶಯದಲ್ಲಿ 1621.98 ಅಡಿ ವರೆಗೆ ನೀರಿದೆ. ಈ ನೀರು 1613 ಅಡಿಗೆ ಇಳಿದ ಬಳಿಕ ಗೇಟ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಹಾಗಾಗಿ ಈಗ ಹಳೇ ಗೇಟ್‌ಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. 33 ಕ್ರಸ್ಟ್‌ಗೇಟ್‌ಗಳ ಪೈಕಿ ಈಗ ಅಳವಡಿಕೆಗೆ 15 ಕ್ರಸ್ಟ್‌ಗೇಟ್‌ಗಳು ಅಳವಡಿಕೆಗೆ ಸಿದ್ಧವಾಗಿವೆ. ಉಳಿದ ಗೇಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಗೇಟ್‌ಗಳ ಅಳವಡಿಕೆಗೆ ತುಂಗಭದ್ರಾ ಮಂಡಳಿ ಯೋಜನೆ ರೂಪಿಸಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ಸದ್ಯ 67.05 ಟಿಎಂಸಿ ನೀರು ಸಂಗ್ರಹ ಇದೆ. ಈ ಪೈಕಿ 19.5 ಟಿಎಂಸಿ ನೀರು ಆಂಧ್ರಪ್ರದೇಶದ ಪಾಲಿನದು. ಇನ್ನು ಐದು ಟಿಎಂಸಿ ತೆಲಂಗಾಣ ರಾಜ್ಯದ ಪಾಲಿನದು. ಉಳಿದ ಪಾಲು ಕರ್ನಾಟಕದ ಕೋಟಾದಲ್ಲಿದೆ. ಜಲಾಶಯದ ನೀರು 43 ಟಿಎಂಸಿಗೆ ತಗ್ಗಿದರೆ, ಗೇಟ್‌ಗಳ ಅಳವಡಿಕೆಗೆ ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರವನ್ನು ಮಂಡಳಿ ಹಾಕಿಕೊಂಡಿದೆ. ಹಾಗಾಗಿ ತುಂಗಭದ್ರಾ ಮಂಡಳಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಪಾಲಿನ ನೀರು ಪಡೆದುಕೊಂಡು ಡಿಸೆಂಬರ್‌ ಅಂತ್ಯದೊಳಗೆ ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ಅನುಕೂಲ ಮಾಡಿಕೊಡಲು ಪತ್ರ ಕೂಡ ಬರೆದಿದೆ. ಈಗ ತ್ರಿವಳಿ ಸರ್ಕಾರಗಳು ತಮ್ಮ ಪಾಲಿನ ನೀರು ಪಡೆಯಲು ಮುಂದಾಗಿದ್ದು, ಗೇಟ್‌ಗಳ ಅಳವಡಿಕೆ ಕಾರ್ಯ ಬೇಗ ನಡೆಯಲಿದೆ ಎಂಬ ಆಶಾಭಾವ ಮೊಳೆತಿದೆ.

ಜಲಾಶಯ ರಾಜ್ಯದ 10 ಲಕ್ಷ ಎಕರೆ ಮತ್ತು ಆಂಧ್ರಪ್ರದೇಶದ 3 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕಳಚಿ ಬಿದ್ದ ಬಳಿಕ ಜಲಾಶಯದ ಗೇಟ್‌ಗಳು ಶಿಥಿಲಗೊಂಡಿರುವುದು ಬೆಳಕಿಗೆ ಬಂದಿತ್ತು.

ತುಂಗಭದ್ರಾ ಮಂಡಳಿ ಡ್ಯಾಂನಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಪಂ ಸಿಇಒ ಅಕ್ರಂ ಷಾ, ಎಸ್ಪಿ ಎಸ್‌. ಜಾಹ್ನವಿ, ಸಹಾಯಕ ಆಯುಕ್ತ ವಿವೇಕಾನಂದ, ಡ್ಯಾಂನ ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ, ಅಧಿಕಾರಿಗಳಾದ ಕುಲಕರ್ಣಿ, ಶ್ರೀನಿವಾಸ್‌ ಮಲ್ಲಿಗೆವಾಡ, ಚಂದ್ರಶೇಖರ, ಜ್ಞಾನೇಶ್ವರ, ರಾಘವೇಂದ್ರ ಮತ್ತಿತರರಿದ್ದರು.