ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ನಾಡಿನ ಅಕ್ಷರ ಚರಿತ್ರೆ ಸಾರುವಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಅರಿವಿಗೆ ಹಳೆಗನ್ನಡ ಸಾಹಿತ್ಯ ಅಧ್ಯಯನ ಮುಖ್ಯವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.ಹಂಪಿ ಕನ್ನಡ ವಿವಿ ಹಸ್ತಪ್ರತಿಶಾಸ್ತ್ರ ವಿಭಾಗದಡಿಯಲ್ಲಿ ಮತ್ತು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ (ಪಪೂ), ಜಿಲ್ಲಾ ಪಪೂ ಕಾಲೇಜುಗಳ, ಕನ್ನಡ ಉಪನ್ಯಾಸಕರ ಒಕ್ಕೂಟ ಬಾಗಲಕೋಟೆ, ತಾಲೂಕು ಕಸಾಪ ಬಾಗಲಕೋಟೆ ಸಹಯೋಗದಲ್ಲಿ ಡಾ.ಡಿ.ಎಲ್.ನರಸಿಂಹಾಚಾರ್ಯ ದತ್ತಿನಿಧಿಯಿಂದ ನಾಲ್ಕು ದಿನಗಳ ಕಾಲ ಬಾಗಲಕೋಟೆ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಿಗೆ 20ನೇ ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡದ ಶ್ರೇಷ್ಠ ವಿದ್ವಾಂಸರಾಗಿದ್ದ ಡಾ.ಡಿ.ಎಲ್.ನರಸಿಂಹಾಚಾರ್ ಅವರ ವ್ಯಾಸಂಗದ ಬಹುಮುಖ್ಯ ನೆಲೆ ಹಳಗನ್ನಡ ಸಾಹಿತ್ಯ. ಆ ಕ್ಷೇತ್ರದಲ್ಲಿ ಅವರದ್ದೇ ಆದ ಹೆಜ್ಜೆ ಗುರುತುಗಳಿವೆ. ಪಾಂಡಿತ್ಯ ಪ್ರಧಾನವಾದ ನೆಲೆಯನ್ನು ಅವರ ಬರಹಗಳಲ್ಲಿ ಕಾಣುತ್ತೇವೆ. ಯಾವುದೇ ಭಾಷೆಯ ಸಾಹಿತ್ಯ ಸಾಮಾಜೀಕರಣಗೊಂಡರೆ ಮಾತ್ರ ಗತಿಶೀಲಗುಣವನ್ನು ಹಾಗೂ ಹೊಸ ಹೊಳವು ಪಡೆಯಲು ಸಾಧ್ಯವಾಗುತ್ತದೆ. ಬಹುದೃಷ್ಟಿಕೋನ ಸಂಶೋಧನೆಯಲ್ಲಿ ಮಹತ್ವ ಪಡೆದುಕೊಂಡಿದ್ದು, ಅಂತಹ ಗುಣವನ್ನು ಪ್ರೊ.ನರಸಿಂಹಾಚಾರ್ ಅವರ ಸಂಶೋಧನ ಬರಹಗಳಲ್ಲಿ ಕಾಣಬಹುದು ಎಂದರು.ಕನ್ನಡ ಗ್ರಂಥ ಸಂಪಾದನೆ, ಪೀಠಿಕೆಗಳು-ಲೇಖನಗಳು, ವಡ್ಡಾರಾಧನೆ, ಪಂಪರಾಮಾಯಣ, ಶಬ್ದಮಣಿದರ್ಪಣ, ಸಿದ್ದರಾಮಚರಿತೆ, ಸಕಲವೈದ್ಯಸಂಹಿತಾ, ಸಾರಾರ್ಣವಂ ಇವು ಅವರ ಅಧ್ಯಯನಪೂರ್ಣ ಸಂಪಾದನ ಕೃತಿಗಳು. ಅವು ಕೇವಲ ಪಠ್ಯಗಳಾಗಿ ಕಾಣದೆ ಕಾಲಾತೀತವಾದ ಸಾಂಸ್ಕೃತಿಕ ಸಂಕಥನಗಳಾಗಿ ಮೂಡಿಬಂದಿವೆ. ಹಳಗನ್ನಡ ವಿದ್ವಾಂಸರಲ್ಲಿ ಡಾ.ಡಿ.ಎಲ್.ನರಸಿಂಹಾಚಾರ್ ಅವರು ಪ್ರಮುಖರು ಎಂದು ಹೇಳಿದರು.ನಾಲ್ಕು ದಿನಗಳ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿದ ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾದ ಪುಂಡಲಿಕ ಕಾಂಬಳೆ ಮಾತನಾಡಿ, ಜಗತ್ತಿನ ಶ್ರೇಷ್ಠ ಭಾಷೆ ಕನ್ನಡ. ಈ ಭಾಷೆ ಬಳಸಿ, ಉಳಿಸಿ ಬೆಳೆಸಬೇಕು. ಇಂದಿನ ಜನಸಾಮಾನ್ಯರಿಗೆ ಹಳಗನ್ನಡದ ಅರಿವು ಮುಖ್ಯ. ಕನ್ನಡ ವಿಶ್ವವಿದ್ಯಾಯದ ಹಸ್ತಪ್ರತಿಶಾಸ್ತ್ರ ವಿಭಾಗದವರು ಆಯೋಜಿಸಿರುವ ಈ ಶಿಬಿರದ ಸದುಪಯೋಗವನ್ನು ನಮ್ಮ ಅಧ್ಯಾಪಕರು ಪಡೆದುಕೊಂಡು ತಮ್ಮ ವಿದ್ಯಾರ್ಥಿಗಳಿಗೆ ಹಳಗನ್ನಡದ ಅಭಿರುಚಿ ಬೆಳೆಸಬೇಕು ಎಂದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ ಆಶಯ ನುಡಿಗಳಾಡಿ, ಪ್ರಸ್ತುತ ಸಂದರ್ಭದಲ್ಲಿ ಹಳಗನ್ನಡ ಸಾಹಿತ್ಯ ತರಬೇತಿ ಶಿಬಿರ ಅತ್ಯವಶ್ಯಕವಾಗಿದೆ. ಹಳಗನ್ನಡ ಕಬ್ಬಿಣದ ಕಡಲೆಯಲ್ಲ. ಅದು ಪಠಿಸಿದಷ್ಟು ಸರಳವಾಗುತ್ತದೆ ಎಂದು ಹೇಳಿದರು.ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ಕುಮಾರವ್ಯಾಸನ ಕಾವ್ಯವನ್ನು ಹೇಳುವುದರೊಂದಿಗೆ ಹಳಗನ್ನಡ ಕಾವ್ಯದ ಗಟ್ಟಿತನವನ್ನು ನಾವೆಲ್ಲರೂ ಅರಿತು ಉಳಿಸಿಕೊಳ್ಳಬೇಕಿದೆ ಎಂದರು.
ಕನ್ನಡ ವಿವಿ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರು, ಶಿಬಿರದ ನಿರ್ದೇಶಕ ಡಾ.ವೀರೇಶ ಬಡಿಗೇರಿ ಪ್ರಾಸ್ತಾವಿಕ ಮಾತನಾಡಿ, ಇತ್ತೀಚೆಗೆ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಾಚೀನ ಸಾಹಿತ್ಯದ ಅಧ್ಯಯನ ತುಂಬ ಉಪೇಕ್ಷೆಗೆ ಒಳಗಾಗುತ್ತಿದೆ. ಅದಕ್ಕಾಗಿ ಪ್ರಾಚೀನ ಪಠ್ಯಗಳ ಪ್ರಸ್ತುತತೆ, ಕೃತಿವಾಚನ, ಕಥಾನಿರೂಪಣೆ, ಪಾಠಸಮಸ್ಯೆ ಬಿಡಿಸುವುದು, ಕೃತಿ, ಭಾಷೆ, ಶೈಲಿ, ಛಂದಸ್ವಾಧಿಗಳನ್ನು ಹಾಗೂ ಕೃತಿಯ ಸಾಂಸ್ಕೃತಿಕ ಪರಿಸರ ಹಾಗೂ ಅನನ್ಯತೆಯನ್ನು ಗುರುತಿಸುವುದು, ಆ ಮೂಲಕ ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ಹಳಗನ್ನಡ ಸಾಹಿತ್ಯವನ್ನು ಓದುವ, ಗ್ರಹಿಸುವ ಮತ್ತು ಆಸಕ್ತಿ ಹೆಚ್ಚಿಸುವ ಉಪಕ್ರಮಗಳನ್ನು ಕೈಗೊಳ್ಳುವುದು ಈ ಶಿಬಿರದ ಆಶಯವಾಗಿದೆ ಎಂದರು.ಈ ವೇಳೆ ಜಿಲ್ಲಾ ಪಪೂ ಕಾಲೇಜುಗಳ ಕನ್ನಡ ಉಪನ್ಯಾಸಕರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಸಿದ್ಧರಾಮ ಖಾನಾಪೂರ, ಸ್ಥಳೀಯ ಸಂಚಾಲಕ ಡಾ.ಚಂದ್ರಶೇಖರ ಕಾಳನ್ನವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಸಲಿಂಗಯ್ಯ ಮಠಪತಿ ಪ್ರಾರ್ಥಿಸಿದರು. ಡಾ.ಸಿದ್ಧರಾಮ ಖಾನಾಪೂರ ಸ್ವಾಗತಿಸಿದರು. ಸಂಗಮೇಶ ಬ್ಯಾಳಿ ವಂದಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.