ಹಳೇ ಪಿಂಚಣಿ ವ್ಯವಸ್ಥೆ, ನಗದು ರಹಿತ ಚಿಕಿತ್ಸೆಗೆ ಆಗ್ರಹ

| Published : Jan 22 2025, 12:31 AM IST

ಸಾರಾಂಶ

ರಾಜ್ಯದ ಸರ್ಕಾರಿ ನೌಕರರಿಗೆ ಅತ್ಯಗತ್ಯವಾಗಿ ಬೇಕಿರುವ ಹಳೆ ಪಿಂಚಣಿ ವ್ಯವಸ್ಥೆ ಮತ್ತು ನಗದು ರಹಿತ ಆರೋಗ್ಯ ಚಿಕಿತ್ಸೆಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಆಗ್ರಹಿಸಿದರು.

ಕನ್ನಡಪ್ರಭವಾರ್ತೆ, ತುರವೇಕೆರೆ

ರಾಜ್ಯದ ಸರ್ಕಾರಿ ನೌಕರರಿಗೆ ಅತ್ಯಗತ್ಯವಾಗಿ ಬೇಕಿರುವ ಹಳೆ ಪಿಂಚಣಿ ವ್ಯವಸ್ಥೆ ಮತ್ತು ನಗದು ರಹಿತ ಆರೋಗ್ಯ ಚಿಕಿತ್ಸೆಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಆಗ್ರಹಿಸಿದರು. ಪಟ್ಟಣದ ಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ಸಂಕ್ರಾಂತಿ ಸಂಭ್ರಮ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಹಳೇ ಪಿಂಚಣಿ ಜಾರಿಗೊಳಿಸಲು ತಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡವುದಾಗಿ ಹೇಳಿದರು. ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ, ಕೇಂದ್ರ ಮಾದರಿಯಲ್ಲಿ ವೇತನ ಜಾರಿ ಹಾಗು ಶಿಕ್ಷಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿಕೊಡುವುದಾಗಿ ಹೇಳಿದರು.

ತಾಲೂಕು ಸರ್ಕಾರಿ ನೌಕರರು ಹಮ್ಮಿಕೊಂಡಿರುವ ಸಂಕ್ರಾಂತಿ ಸಂಭ್ರಮ ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಮನರಂಜನೆಯನ್ನು ಪಡೆಯಲು ಉತ್ತಮ ವೇದಿಕೆಯಾಗಿದೆ. ಹಾಗಾಗಿ ಈ ರೀತಿಯ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಮಾಡುವುದಾಗಿ ಸಿ.ಎಸ್. ಷಡಕ್ಷರಿ ಘೋಷಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ ಟಿ ಕೃಷ್ಣಪ್ಪ ತಾವು ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಕಾಲದಿಂದಲೂ ಸಹ ನೌಕರರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದ್ದೇನೆ ಎಂದರು. ತಾಲೂಕು ಅಧ್ಯಕ್ಷ ಡಾ.ನವೀನ್ ನೇತೃತ್ವದ ತಾಲೂಕು ನೌಕರರ ಸಂಘ ಬಹಳ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜ್ಯ ಘಟಕದ ನೂತನ ಖಜಾಂಚಿ ವಿ ವಿ ಶಿವರುದ್ರಯ್ಯ, ತುರುವೇಕೆರೆ ತಾಲೂಕಿನ ನೌಕರರ ಸಂಘದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ನೌಕರರ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ನವೀನ್ ತುರುವೇಕೆರೆ ತಾಲೂಕಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಈ ರೀತಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನೌಕರರ ಸಹಕಾರದೊಂದಿಗೆ ನೌಕರರ ಸಂಘವನ್ನು ಕ್ರಿಯಾಶೀಲವಾಗಿ ಇಡುವುದಾಗಿ ಹೇಳಿದರು, ಹಾಗೂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು. ಇದೇ ಸಂಧರ್ಭದಲ್ಲಿ ತಾಲೂಕು ನೌಕರರ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ, ಹಾಗೂ ನೃತ್ಯ ಮಾಡಿದ ನೌಕರರಿಗೆ ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎಚ್ .ಗಿರಿಗೌಡ, ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು, ಡಾ.ಚೌದ್ರಿ ನಾಗೇಶ್, ಇ.ಒ ಶಿವರಾಜಯ್ಯ, ಬಿಇಒ ಸೋಮಶೇಖರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿವಯ್ಯ, ನೌಕರರ ಸಂಘದ ಮಾಜಿ ಅಧ್ಯಕ್ಷರುಗಳು, ಜಿಲ್ಲೆಯ ವಿವಿಧ ತಾಲೂಕಿನ ನೌಕರ ಸಂಘದ ಅಧ್ಯಕ್ಷರುಗಳು ಸೇರಿದಂತೆ ತಾಲ್ಲೂಕು ನೌಕರರ ಸಂಘದ ಎಲ್ಲಾ ನಿರ್ದೇಶಕರುಗಳು, ಹಾಗು ಎಲ್ಲಾ ಇಲಾಖೆಯ ನೌಕರರು ಭಾಗವಹಿಸಿದ್ದರು.