ವೃದ್ದಾಪ್ಯ ವೇತನ ಪಡೆಯಲು ಬಿಸಿಲಿನಲ್ಲಿ ನಿಂತ ವೃದ್ದರು

| Published : Aug 22 2024, 12:52 AM IST

ಸಾರಾಂಶ

ಚಳ್ಳಕೆರೆ ನಗರದಾದ್ಯಂತ ವೃದ್ದಾಪ್ಯ, ವಿಧವವೇತನ ಸೇರಿದಂತೆ ಸರ್ಕಾರದಿಂದ ಬರುವ ಮಾಸಾಶನವನ್ನು ತ್ಯಾಗರಾಜ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿತ್ತು. ನಗರದ ವಿವಿಧೆಡೆಗಳಿಂದ ಬಂದ ವಯೋವೃದ್ದರಿಗೆ ಅಂಚೆ ಕಚೇರಿಯ ಒಳಗೆ ಪ್ರವೇಶಿಸಿ ತಮ್ಮ ಹಣವನ್ನು ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.

ಚಳ್ಳಕೆರೆ: ಚಳ್ಳಕೆರೆ ನಗರದಾದ್ಯಂತ ವೃದ್ದಾಪ್ಯ, ವಿಧವವೇತನ ಸೇರಿದಂತೆ ಸರ್ಕಾರದಿಂದ ಬರುವ ಮಾಸಾಶನವನ್ನು ತ್ಯಾಗರಾಜ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿತ್ತು. ನಗರದ ವಿವಿಧೆಡೆಗಳಿಂದ ಬಂದ ವಯೋವೃದ್ದರಿಗೆ ಅಂಚೆ ಕಚೇರಿಯ ಒಳಗೆ ಪ್ರವೇಶಿಸಿ ತಮ್ಮ ಹಣವನ್ನು ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.

ಇದರಿಂದ ಬಿಸಿಲು, ಗಾಳಿ, ಮಳೆಯಿಂದ ರಕ್ಷಣೆ ಪಡೆದು ವಯೋವೃದ್ದರು ತಮ್ಮ ಹಣ ಪಡೆಯುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡದೇ ಮಾಸಾಶನ ಬಯಸಿಬರುವ ವೃದ್ದರಿಗೆ ಅಂಚೆ ಕಚೇರಿ ಹೊರಭಾಗದ ಮೂಲೆಯೊಂದರಲ್ಲಿ ನಿಂತು ಕಿಟಕಿಯ ಮೂಲಕವೇ ಹಣ ಪಡೆಯುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಇದರಿಂದ ವಯೋವೃದ್ದರು, ಅಂಗವಿಕಲರು ಬಿಸಿಲು, ಮಳೆಯಲ್ಲೇ ಗಂಟೆಗಟ್ಟಲೆ ನಿಂತು ತಮ್ಮ ಪಾಲಿನ ಮಾಸಾಶನವನ್ನು ಪಡೆಯುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಮನನೊಂದ ಗಂಗಮ್ಮ, ಸುಲೋಚನ, ಬೋರಣ್ಣ, ಸುರೇಶ್ ಮುಂತಾದವರು ಅಂಚೆ ಕಚೇರಿಯ ಈ ದಿಢೀರ್ ಬದಲಾವಣೆಗೆ ಅಸಮದಾನವನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಯಾರಿಗೆ ಶಕ್ತಿ ಇದೆಯೋ ಅವರು ಮುಂದೆ ಬಂದು ಇಲ್ಲಿ ಹಣ ಪಡೆಯಬಹುದಾಗಿದೆ. ಸರದಿ ಸಾಲಿನಲ್ಲಿ ನಿಲ್ಲಿಸಿ ಹಣ ಕೊಡಿಸುವ ವ್ಯವಸ್ಥೆ ಇಲ್ಲಿ ಇಲ್ಲ. ಆದ್ದರಿಂದ ಅಂಚೆ ಕಚೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿ ತಿಂಗಳ ಮಾಸಾಶವನ್ನು ಕಚೇರಿಯ ಒಳ ಆವರಣದಲ್ಲೇ ಪಡೆಯುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.