ಒಂಟಿ ಸಲಗ ದಾಳಿಗೆ ವೃದ್ಧೆ ಬಲಿ

| Published : Aug 06 2024, 12:32 AM IST

ಸಾರಾಂಶ

ಕೆಲ ತಿಂಗಳಿಂದ ನಾಪತ್ತೆಯಾಗಿದ್ದ ಆನೆಗಳು ಈಗ ದಿಢೀರನೆ ಕಾಣಿಸಿಕೊಂಡು ಮಹಿಳೆಯೊಬ್ಬರ ಪ್ರಾಣ ತೆಗೆದುಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ದೋಣಿಮಡಗು ಗ್ರಾಪಂನ ಪೊಲೇನಹಳ್ಳಿ ಗ್ರಾಮದ ವ್ಯಾಪಾರಿಯನ್ನು ಬಲಿ ಪಡೆದಿದ್ದ ಒಂಟಿ ಸಲಗ ಈಗ ವೃದ್ಧೆಯನ್ನು ಸಾಯಿಸಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಒಂಟಿ ಸಲಗ ದಾಳಿಗೆ ಸಿಲುಕಿ ವೃದ್ಧೆಯೊಬ್ಬಳು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಬೂದಿಕೋಟೆ ಹೋಬಳಿಯ ಬಲಮಂದೆ ಗ್ರಾಮ ಪಂಃಯ ಚತ್ತಗುಟ್ಟಹಳ್ಳಿ ಗ್ರಾಮದ ರಾಧಾಬಾಯಿ(70) ಮೃತಪಟ್ಟ ವೃದ್ಧೆ. ಅವರು ಭಾನುವಾರ ಭಾನುವಾರ ಗ್ರಾಮದ ಹೊರವಲುದಲ್ಲಿರುವ ಅರಣ್ಯದಲ್ಲಿ ಕುರಿ ಮೇಯಿಸಲು ಹೋಗಿದ್ದಾಗ ಕಾಡಾನೆ ದಾಳಿ ನಡೆಸಿದೆ. ಘಟನೆ ನಡೆದಾಗ ಮಹಿಳೆ ಜೋರಾಗಿ ಚೀರಾಟ ಮಾಡಿದ್ದಾಳೆ, ಆಗ ಅಕ್ಕಪಕ್ಕದವರು ಧಾವಿಸಿ ವೃದ್ಧೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾಳೆ.

ಗ್ರಾಮದಲ್ಲಿ ಆತಂಕ ಸೃಷ್ಟಿ

ಈ ಘಟನೆಯಿಂದ ಬಲಮಂದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗ್ರಾಮಸ್ಥರ ಆತಂಕ ಮತ್ತೆ ಹೆಚ್ಚಿಸಿದೆ.ಕೆಲ ತಿಂಗಳಿಂದ ನಾಪತ್ತೆಯಾಗಿದ್ದ ಆನೆಗಳು ಈಗ ದಿಢೀರನೆ ಕಾಣಿಸಿಕೊಂಡು ಮಹಿಳೆಯೊಬ್ಬರ ಪ್ರಾಣ ತೆಗೆದುಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ದೋಣಿಮಡಗು ಗ್ರಾಪಂನ ಪೊಲೇನಹಳ್ಳಿ ಗ್ರಾಮದ ವೀಳ್ಯೆದೆಲೆ ವ್ಯಾಪಾರಿಯೊಬ್ಬರನ್ನು ಬಲಿ ಪಡೆದಿದ್ದ ಒಂಟಿ ಸಲಗ ಈಗ ವೃದ್ಧೆಯನ್ನು ಸಾಯಿಸಿದೆ.ಚತ್ತಗುಟ್ಟಹಳ್ಳಿ ಅರಣ್ಯದಲ್ಲಿ ಒಂಟಿ ಆನೆ ಓಡಾಟ ಮಾಡುತ್ತಿರುವ ಬಗ್ಗೆ ಕಾಮಸಮುದ್ರ ಪೊಲೀಸರು ಎಲ್ಲಾ ಗ್ರಾಮಗಳಲ್ಲಿ ಧ್ವನಿ ವರ್ಧಕ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇನ್ನೂ ಎಷ್ಟು ಜನರ ಪ್ರಾಣ ಬಲಿ ಕೊಡಬೇಕೆಂದು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

..............................

ಬಾಕ್ಸ್‌,,,,,, ಸೂಚನೆ ಉಲ್ಲಂಘನೆ

ಈ ಬಗ್ಗೆ ಪ್ರತಿಕ್ರಿಸಿದ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ, ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಗಡಿ ಭಾಗದ ಗ್ರಾಮಗಳಲ್ಲಿ ಹಗಲು ರಾತ್ರಿ ಆನೆಗಳು ಗ್ರಾಮಗಳತ್ತ ಬಾರದಂತೆ ಕಾವಲು ಕಾಯುತ್ತಿರುವುದರಿಂದ ಹಲವು ತಿಂಗಳುಗಳಿಂದ ಎಲ್ಲಿಯೂ ಆನೆಗಳು ಕಾಣಿಸಿಲ್ಲ ಹಾಗೂ ಯಾವುದೇ ಬೆಳೆ ಹಾನಿ ಸಹ ಸಂಭವಿಸಿಲ್ಲ. ಅರಣ್ಯದೊಳಗೆ ಕುರಿ ಮೇಯಿಸುವಾಗ ಈ ಘಟನೆ ನಡೆದಿದೆ, ಕಾಡಿನೊಳಗೆ ಯಾರೂ ದನ, ಕುರಿ ಮೇಯಿಸಲು ಹೋಗಬಾರದು ಎಂದು ತಿಳಿವಳಿಕೆ ನೀಡಿದ್ದರೂ ಲೆಕ್ಕಿಸದೆ ಹೋಗಿರುವುದರಿಂದ ಅನಾಹುತ ನಡೆದಿದೆ ಎಂದರು.