ಸಾರಾಂಶ
ಪಟ್ಟಣದಿಂದ ಓಎಲ್ವಿ ಕಾನ್ವೆಂಟ್ ಮತ್ತು ಹಾನಗಲ್ಲು ಬಾಣೆಗೆ ಸಂಪರ್ಕಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ಗುಂಡಿಗಳಾಗಿದೆ. ಇಲ್ಲಿಯವರೆಗೆ ಸರಿಪಡಿಸಲು ಯಾರೂ ಮುಂದಾಗಿಲ್ಲ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದಿಂದ ಓಎಲ್ವಿ ಕಾನ್ವೆಂಟ್ ಮತ್ತು ಹಾನಗಲ್ಲು ಬಾಣೆಗೆ ಸಂಪರ್ಕಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ಗುಂಡಿಗಳಾಗಿದ್ದು, ಇಲ್ಲಿಯವರೆಗೂ ಸರಿಪಡಿಸಲು ಯಾರೂ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.ಎರಡೂ ಬದಿಯಲ್ಲಿ ಏರು ರಸ್ತೆ ಇದ್ದು, ಮಧ್ಯದಲ್ಲಿ ಮಾತ್ರ ಸಮತಟ್ಟಾದ ರಸ್ತೆ ಇದೆ. ಇದು ಕಿರಿದಾದ ರಸ್ತೆಯಾಗಿದ್ದು, ಪೂರ ಗುಂಡಿಗಳಿಂದ ಕೂಡಿದೆ. ವಾಹನ ಸಂಚಾರಕ್ಕೆ ಮತ್ತು ಜನರು ರಾತ್ರಿ ಸಮಯದಲ್ಲಿ ನಡೆಯಲು ಆಗದಂತಹ ಪರಿಸ್ಥಿತಿ ಇದೆ. ಇದೇ ರಸ್ತೆಯಲ್ಲಿ ಕಾನ್ವೆಂಟ್‌ಗೆ ತೆರಳಲು ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಅಲ್ಲದೆ, ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಅಪಾಯಕ್ಕೆ ದಾರಿಯಾಗಿದೆ. ರಸ್ತೆ ಸರಿಪಡಿಸಲು ಸಾಕಷ್ಟು ಭಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿ ಸಂಚರಿಸುವ ಜನರ ದೂರಾಗಿದೆ. ಹಲವು ಆಡಳಿತ ಪಕ್ಷದ ಪ್ರಮುಖರು ಇಲ್ಲಿಯೇ ಸಂಚರಿಸಿದರೂ, ರಸ್ತೆ ಸರಿಪಡಿಸಲು ಮಾತ್ರ ಮುಂದಾಗುತ್ತಿಲ್ಲ. ಅಪಾಯ ಎದುರಾಗುವ ಮುನ್ನ ರಸ್ತೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.