ಹಾವೇರಿ ಜಿಲ್ಲೆಯಲ್ಲಿ ಅನುರಣಿಸಿದ ಓಂ ನಮಃ ಶಿವಾಯ

| Published : Mar 09 2024, 01:34 AM IST

ಸಾರಾಂಶ

ಮಹಾಶಿವರಾತ್ರಿ ಅಂಗವಾಗಿ ಹಾವೇರಿ ಜಿಲ್ಲೆಯಾದ್ಯಂತ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 88ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಗರದಲ್ಲಿ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ಜರುಗಿತು.

ಹಾವೇರಿ: ಜಿಲ್ಲಾದ್ಯಂತ ಶುಕ್ರವಾರ ಶಿವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿಯನ್ನು ಜನತೆ ಭಕ್ತಿ ಭಾವದಿಂದ ಆಚರಿಸಿದರು. ಎಲ್ಲೆಡೆ ಓಂ ನಮಃ ಶಿವಾಯ ಅನುರಣಿಸಿತು.

ನಗರದ ಈಶ್ವರ ದೇವಸ್ಥಾನ, ಪುರಸಿದ್ದೇಶ್ವರ ದೇವಸ್ಥಾನ, ಹುಕ್ಕೇರಿಮಠ, ಈಶ್ವರೀಯ ವಿಶ್ವವಿದ್ಯಾಲಯ, ವೀರಭದ್ರೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶಿವಮೂರ್ತಿಗೆ ಜನತೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಿಂಚನದಲ್ಲಿ ಮಿಂದು ಪುಳಕಿತರಾದರು.

ಶಿವರಾತ್ರಿಯ ವಿಶೇಷ ಪೂಜೆಗೆ ಬಹುತೇಕ ಎಲ್ಲ ಕಡೆಗಳಲ್ಲೂ ದೇವಸ್ಥಾನಗಳು ವಿಶೇಷ ಪೂಜೆ ಆಯೋಜಿಸಿದ್ದವು. ಶಿವರಾತ್ರಿ ಆಚರಣೆಗೆ ನಗರದ ಜನತೆ ಸಿದ್ಧತೆಯಲ್ಲಿ ತೊಡಗಿತ್ತು. ಬೆಳಗ್ಗೆಯಿಂದ ಶ್ವೇತ ವಸ್ತ್ರಧಾರಿಗಳ ದಂಡು ವಿಶೇಷವಾಗಿ ಶಿವದೇವಾಲಯಗಳಲ್ಲಿ ಕಂಡು ಬಂದಿತು.

ಶಿವ ದೇವಾಲಯಗಳಲ್ಲಿ ಮಹಿಳೆಯರು ವಿಶೇಷ ಪೂಜೆಯ ಕಾರ್ಯಗಳಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಅಲ್ಲಲ್ಲಿ ಸಿಗುವ ಬನ್ನಿಗಿಡ, ಪತ್ರಿಗಿಡಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಧನ್ಯತಾಭಾವ ಮೆರೆದರು. ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಲಕ್ಷಬಿಲ್ವಾರ್ಚನೆ, ಎಲೆಪೂಜೆ, ಕಂಕಣಪೂಜೆ, ಅಭಿಷೇಕ, ಕ್ಷೀರಾಭಿಷೇಕದಲ್ಲಿ ಭಕ್ತರು ತೊಡಗಿದ್ದರು.

ಶಿವರಾತ್ರಿಯಂದು ಬಿಲ್ವಪತ್ರೆಗೆ ವಿಶೇಷ ಬೇಡಿಕೆ. ಹೀಗಾಗಿ ನಗರದ ಜನತೆ ಬಿಲ್ವಪತ್ರೆ ಮರಗಳಿದ್ದಲ್ಲಿಗೆ ತೆರಳಿದ ಭಕ್ತರು ಕೈಗೆ ನಿಲುಕಿದಷ್ಟು ಬಿಲ್ವಪತ್ರೆಯನ್ನು ಕೊಯ್ದರು. ಕೆಲವರು ಏಣಿ ಹಿಡಿದು ಮರವೇರಿ ಬಿಲ್ವಪತ್ರೆ ಸಂಗ್ರಹಿಸಿದರು. ಸಿಂದಗಿ ಮಠ ಹಾಗೂ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾಗರಣೆಯಲ್ಲೂ ಜನತೆ ಪಾಲ್ಗೊಂಡಿದ್ದರು.

ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಪ್ರಖರಗೊಳ್ಳುತ್ತಿದ್ದು, ಶಿವರಾತ್ರಿಯ ದಿನವಾದ ಶುಕ್ರವಾರ ಸೂರ್ಯ ದೇವನ ತಾಪ ಹೆಚ್ಚಿತ್ತು. ಶಿವರಾತ್ರಿ ಅಂಗವಾಗಿ ಉಪವಾಸ, ಉಪಾಸನೆ, ಆರಾಧನೆ ಮಾಡುವವರಿಗೆ ಕೊಂಚ ಕಷ್ಟವಾಯಿತು. ಆದರೂ ಕೈಯಲ್ಲಿ ಜಪಮಾಲೆ ಹಿಡಿದು ಧ್ಯಾನ ಮಾಡುತ್ತಾ ತಾಪ ಮರೆಯುವ ಪ್ರಯತ್ನ ಮಾಡಿದರು.

ಜ್ಯೋತಿರ್ಲಿಂಗ ಶೋಭಾಯಾತ್ರೆ: ಹಾವೇರಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 88ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಗರದಲ್ಲಿ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ಜರುಗಿತು.

ಜಯದೇವ ನಗರದ ಶಿವಾಲಯದಿಂದ ಆರಂಭವಾದ ಯಾತ್ರೆ ಎಂಜಿ ರಸ್ತೆ, ಹುಕ್ಕೇರಿ ಮಠ, ಸುಭಾಸ ರಸ್ತೆ, ಪುರದ ಓಣಿ, ಬಸವೇಶ್ವರ ನಗರ, ಮತ್ತಿತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಹೊಸಳ್ಳಿ, ಆಲದಕಟ್ಟಿ, ತರ ಗ್ರಾಮಗಳಲ್ಲೂ ಯಾತ್ರೆ ಸಂಚರಿಸಿತು.

ಜಯದೇವ ನಗರದ ಶಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಶಿವರಾತ್ರಿ ಅಧ್ಯಾತ್ಮಿಕ ರಹಸ್ಯ ಕುರಿತು ಹಾವೇರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿಯವರು ವಿವರಿಸಿದರು.

ಶಿವಾಲಯದಲ್ಲಿನ 58 ಅಡಿ ಎತ್ತರದ ಶಿವಲಿಂಗ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಸಂಜೆ ಪರಮಾತ್ಮನ ದರ್ಶನ, ರಾಜಯೋಗ ಶಿಬಿರ ಕಾರ್ಯಕ್ರಮ ಜರುಗಿತು.

ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖೇಶ ಮುಂದಿನಮನಿ, ವಿಶ್ವನಾಥ ಹಂದ್ರಾಳ, ಚನ್ನಬಸಣ್ಣ ಹಾವೇರಿ, ಮಲ್ಲಪ್ಪ ಕುಂಬಾರಗೇರಿ, ಶಿವಯೋಗಿ ದೇವಿಹೊಸೂರ, ಸದಾಶಿವ, ಮಹೇಂದ್ರ, ಶೇಖಪ್ಪ ಚಕ್ರಸಾಲಿ, ವೈಶಾಲಿ, ಅನ್ನಪೂರ್ಣಾ, ಕಲಾವತಿ, ಮತ್ತಿತರರು ಪಾಲ್ಗೊಂಡಿದ್ದರು.

ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ: ಸ್ಥಳೀಯ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಶ್ರೀ ಗಜಾನನ ಹಾಗೂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ದ್ವಾದಶ ಜ್ಯೋತಿರ್ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವು, ಬಿಲ್ವಪತ್ರೆಯಿಂದ ದ್ವಾದಶ ಜೋತಿರ್ಲಿಂಗಗಳನ್ನು ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ದ್ವಾದಶ ಜೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ೧೨ ಗಂಟೆಗೆ ಕೂಡಲದ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದ್ವಾದಶ ಜೋತಿರ್ಲಿಂಗಗಳಿಗೆ ಮಹಾ ಮಂಗಳಾರತಿ ಹಾಗೂ ಆಶೀರ್ವಚನ ನಡೆಯಿತು.