ಸಾರಾಂಶ
- ಜಿಲ್ಲಾಡಳಿತದಿಂದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಜೀವನದ ಅನುಭವ ಕಲಿಸಿಕೊಟ್ಟು, ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ತ್ರಿಪದಿ ಕವಿ ಶ್ರೀ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಸರ್ವಜ್ಞ ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಗಳಲ್ಲೇ ಅಚ್ಚುಕಟ್ಟು ವರ್ಣನೆ ಮಾಡಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ. ಸರ್ವಜ್ಞ ಸತ್ಯಶುದ್ಧ ಕಾಯಕವನ್ನು ಮಾಡುತ್ತಾ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು, ಸಮಾಜದ ಜ್ಞಾನವನ್ನು ಅರಿತವನು. ಸರ್ವಜ್ಞ ಕವಿ ವಿದ್ಯೆ, ಕೃಷಿ ಹಾಗೂ ಜೀವನದ ಕುರಿತ ಆಳವನ್ನು ಅಳೆಯುವುದರ ಮೂಲಕ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ತ್ರಿಪದಿಗಳಲ್ಲಿ ಮಾನವೀಯ, ಸರಳ ಬದುಕಿನ ಒಳಅರಿವುಗಳು ಜಾಸ್ತಿಯಾಗಿವೆ. ಶ್ರೀಸಾಮಾನ್ಯರಿಗೂ ಅರ್ಥವಾಗುವಂಥ ರಚನೆಗಳಾಗಿವೆ. ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂಥ ಕೆಲಸವನ್ನು ಮಾಡಬೇಕು ಎಂದರು.ಸಮಾಜದ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ, ತ್ರಿಪದಿ ಎಂದರೆ ಮೂರು ಸಾಲುಗಳ ಕವಿತೆ. ಆದ್ದರಿಂದ ಸರ್ವಜ್ಞನನ್ನು ತ್ರಿಪದಿ ಕವಿ ಎನ್ನುತ್ತಾರೆ. ಸರ್ವಜ್ಞರ ವ್ಯಕ್ತಿತ್ವ ಅನಿಕೇತನವಾದದ್ದು. ನಿಂತಲ್ಲಿ ನಿಲ್ಲದೇ, ಗಾಳಿಯಂತೆ ಅಲೆದವರು. ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಸುತ್ತಿದವನು. ಕೈಯಲ್ಲೊಂದು ಕಪ್ಪರವನ್ನು ಹಿಡಿದು, ಹಿರಿದಾದ ನಾಡು ಎದುರಿಗಿರುವಾಗ ಪರಮೇಶನೆಂಬ ನಾಮವನ್ನು ನೆಚ್ಚಿ, ತಿರಿಯುತ್ತಲೇ ಊರೂರು ಸುತ್ತಿದ ಚಾರಣ ಕವಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕುಂಬಾರ ಸಮಾಜದ ಕಾರ್ಯದರ್ಶಿ ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು.- - - -20ಕೆಡಿವಿಜಿ32.ಜೆಪಿಜಿ:
ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಸರ್ವಜ್ಞ ಜಯಂತಿ ಆಚರಿಸಲಾಯಿತು. ಡಿಸಿ ಗಂಗಾಧರ ಸ್ವಾಮಿ, ಅಪರ ಡಿಸಿ ಪಿ.ಎನ್. ಲೋಕೇಶ್, ಜಿಪಂ ಸಿಇಒ ಸುರೇಶ ಇಟ್ನಾಳ್, ಪುಷ್ಪರಾಜ್, ಎಎಸ್ಪಿ ಮಂಜುನಾಥ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ರವಿಚಂದ್ರ ಇದ್ದರು.