12ರಂದು ರಾನಿ ಸಿನಿಮಾ ರಾಜ್ಯಾದ್ಯಂತ ಬೆಳ್ಳಿತೆರೆಗೆ

| Published : Sep 11 2024, 01:09 AM IST

12ರಂದು ರಾನಿ ಸಿನಿಮಾ ರಾಜ್ಯಾದ್ಯಂತ ಬೆಳ್ಳಿತೆರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭಾವಂತ ಕುಂಚ ಕಲಾವಿದನೊಬ್ಬ ಗ್ಯಾಂಗ್ ಸ್ಟರ್‌ ಹೇಗಾದ ಎಂಬ ಕಥಾ ತಿರುಳಿನ ರಾನಿ ಸಿನಿಮಾ ಸೆ.12ರಂದು ರಾಜ್ಯಾದ್ಯಂತ ಸುಮಾರು 200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸಿನಿಮಾ ನಿರ್ದೇಶಕ ಗುರುತೇಜ ಶೆಟ್ಟಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕುಂಚ ಕಲಾವಿದ ಗ್ಯಾಂಗ್‌ಸ್ಟರ್ ಆಗುವ ಕಥೆ: ಗುರುತೇಜ ಶೆಟ್ಟಿ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಭಾವಂತ ಕುಂಚ ಕಲಾವಿದನೊಬ್ಬ ಗ್ಯಾಂಗ್ ಸ್ಟರ್‌ ಹೇಗಾದ ಎಂಬ ಕಥಾ ತಿರುಳಿನ ರಾನಿ ಸಿನಿಮಾ ಸೆ.12ರಂದು ರಾಜ್ಯಾದ್ಯಂತ ಸುಮಾರು 200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸಿನಿಮಾ ನಿರ್ದೇಶಕ ಗುರುತೇಜ ಶೆಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ ಪೂಜಾರಿ, ಉಮೇಶ ಹೆಗ್ಡೆ ನಿರ್ಮಿಸಿರುವ ರಾನಿ ಸಿನಿಮಾ ಈ ವರ್ಷದ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿದೆ. ರಾನಿ ಸಿನಿಮಾದಲ್ಲಿ ಆಕ್ಷನ್ ಎಲಿಮೆಂಟ್ಸ್ ಹೆಚ್ಚಾಗಿದ್ದರೂ, ಅದರ ಹಿಂದೊಂದು ಕೌಟುಂಬಿಕ ಕಥೆ, ನವಿರಾದ ಪ್ರೇಮಕಥೆ ಸಹ ಇದೆ ಎಂದರು.

ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್‌ರಾಜ್‌ ಇದೇ ಮೊದಲ ಸಲ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕ ರಾಘ‍ವ ಅದ್ಭುತ ಕುಂಚ ಕಲಾವಿದ. ಆತನ ಕೈಗೆ ಕುಂಚದ ಬದಲು ಗನ್‌ ಹೇಗೆ ಬಂದಿತು, ಗ್ಯಾಂಗ್ ಸ್ಟರ್‌ ರಾನಿ ಹೇಗಾದ ಎಂಬುದರ ಹಿಂದೆ ಚಿತ್ರಕತೆ ಸಾಗುತ್ತದೆ. ರಾಧ್ಯ, ಅಪೂರ್ವ, ಸಮೀಕ್ಷಾ ಮೂವರು ನಾಯಕರಿರುವ ಸಿನಿಮಾ ಇದಾಗಿದೆ ಎಂದು ಹೇಳಿದರು.

ಗುರುಪ್ರಸಾದ್‌, ಬಿ.ಸುರೇಶ, ರವಿಶಂಕರ, ಸುಜಯ್ ಶಾಸ್ತ್ರಿ ಸೇರಿದಂತೆ ಐವರು ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಗಿರೀಶ ಹೆಗ್ಡೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ರಾಘವೇಂದ್ರ ಬಿ.ಕೋಲಾರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಉತ್ತಮ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ ಪೆರ್ಡೂರ್‌ ಕಲಾ ನಿರ್ದೇಶನ ಮಾಡಿದ್ದು, ಉಮೇಶ್‌ರ ಸಂಕಲನವಿದೆ. ಇಡೀ ಚಿತ್ರದಲ್ಲಿ ಸಾಕಷ್ಟು ಪ್ರಸಿದ್ಧ ತಂತ್ರಜ್ಞರು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ರಾನಿ ಸಿನಿಮಾದಲ್ಲಿ ವಿನೋದ್ ಮಾಸ್ಟರ್ ಆ್ಯಕ್ಷನ್ ಕಂಪೋಸ್ ಮಾಡಿದ್ದಾರೆ. 4 ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಕುನಾಲ್ ಗಾಂಜಾವಾಲಾ, ಹಂಸಿಕಾ ಅಯ್ಯರ್‌ ಹಾಡಿದ್ದಾರೆ. ಗಿರೀಶ್ ಹೆಗ್ಡೆ, ಕರಿಸುಬ್ಬು, ಮೈಕೋ ನಾಗರಾಜ, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ, ಶ್ರೀಧರ್, ಲಕ್ಷ್ಮಿ ಸಿದ್ದಯ್ಯ ಮುಂತಾದವರು ತಾರಾಗಣದಲ್ಲಿದ್ದಾರೆ ಎಂದು ಗುರುತೇಜ ಶೆಟ್ಟಿ ವಿವರಿಸಿದರು.

ನಾಯಕ ನಟ ಕಿರಣ್ ರಾಜ್ ಮಾತನಾಡಿ, ರಾನಿ ಸಿನಿಮಾದಲ್ಲಿ ಕನಸಿನ ಹಿಂದೆ ಓಡುವ ಹುಡುಗನಾಗಿ, ಕನಸಿನ ಮೇಲೆ ನಂಬಿಕೆ ಹೊಂದಿದ, ಆಕ್ಷನ್ ಹೀರೋ ಅಭಿನಯಿಸಿದ್ದೇನೆ. ಇದು ನಾಯಕನಾಗಿ ನನ್ನ ಮೂರನೇ ಕೌಟುಂಬಿಕ ಹಿನ್ನೆಲೆ ಸಿನಿಮಾ ಆಗಿದೆ. ಪ್ರೇಕ್ಷಕರು ಚಿತ್ರ ಮಂದಿರಕ್ಕೆ ತೆರಳಿ, ರಾನಿ ಸಿನಿಮಾ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾನಿ ಸಿನಿಮಾದ ನಿರ್ಮಾಪಕ ಚಂದ್ರಕಾಂತ್ ಪೂಜಾರಿ ಇದ್ದರು.

- - -

ಕೋಟ್‌

ಚಿತ್ರರಂಗವು ಈಗ ಪ್ರೇಕ್ಷಕರ ಕೊರತೆ ಎದುರಿಸುತ್ತಿರುವುದು ನಿಜ. ಒಳ್ಳೆಯ ಸಿನಿಮಾಗಳು ಬರುತ್ತಿವೆ. ಜನರು ಸಹ ಚಿತ್ರ ಮಂದಿರಗಲಿಗೆ ಬರಬೇಕು. ಹಳೆಯ ದಿನಗಳು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರುಕಳಿಸಬೇಕು

- ಗುರುತೇಜ್ ಶೆಟ್ಟಿ, ನಿರ್ದೇಶಕ

- - - -9ಕೆಡಿವಿಜಿ3, 4:

ದಾವಣಗೆರೆಯಲ್ಲಿ ರಾನಿ ಚಿತ್ರದ ನಿರ್ದೇಶಕ ಗುರುತೇಜ್ ಶೆಟ್ಟಿ, ನಾಯಕ ನಟ ಕಿರಣ್ ರಾಜ್, ನಿರ್ಮಾಪಕ ಚಂದ್ರಕಾಂತ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.