12ರಂದು ‘ಯುವ ನಿಧಿ’ಗೆ ಶಿವಮೋಗ್ಗದಲ್ಲಿ ಚಾಲನೆ: ಸಚಿವ ಡಾ.ಸುಧಾಕರ್‌

| Published : Jan 09 2024, 02:00 AM IST

12ರಂದು ‘ಯುವ ನಿಧಿ’ಗೆ ಶಿವಮೋಗ್ಗದಲ್ಲಿ ಚಾಲನೆ: ಸಚಿವ ಡಾ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೊಗಾಕಾಂಕ್ಷಿಗಳ ಆರ್ಥಿಕ ಹೊರೆ ಹಾಗೂ ಅವರ ಪೋಷಕರ ಆರ್ಥಿಕ ಒತ್ತಡವನ್ನು ತಗ್ಗಿಸಲು ಯುವ ನಿಧಿ ಯೋಜನೆ ನೆರವಾಗಲಿದೆ. ರಾಜ್ಯದಲ್ಲಿ 49 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಯೋಜನೆಯಡಿ ನೋಂದಣಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಉದ್ಯೋಗ ಅರಸುವ ಉದ್ಯೊಗಾಕಾಂಕ್ಷಿಗಳ ಆರ್ಥಿಕ ಹೊರೆ ಹಾಗೂ ಅವರ ಪೋಷಕರ ಆರ್ಥಿಕ ಒತ್ತಡವನ್ನು ತಗ್ಗಿಸಲು ಯುವ ನಿಧಿ ಯೋಜನೆ ನೆರವಾಗಲಿದೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ಸೋಮವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಯುವನಿಧಿ ಯೋಜನೆಯ ಕುರಿತ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಡಿಸೆಂಬರ್ 26 ರಂದು ಮುಖ್ಯಮಂತ್ರಿಗಳು ಈ ಯೋಜನೆಯ ನೋಂದಣಿಗೆ ಚಾಲನೆ ನೀಡಿದರು ಎಂದರು.

ಶಿವಮೊಗ್ಗದಲ್ಲಿ ಯೋಜನೆಗೆ ಚಾಲನೆ

ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಜ. 12 ರ ಸ್ವಾಮಿ ವಿವೇಕಾನಂದರ ಜಯಂತಿಯಂದು ನೇರ ನಗದು ವರ್ಗಾವಣೆ(ಡಿಬಿಟಿ) ಮಾಡುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ,ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಸಚಿವರು ಮತ್ತು ಶಾಸಕರು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಯೋಜನೆಯಡಿ ಪ್ರಸ್ತುತ 6,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹರಿರುತ್ತಾರೆ. ಈ ಪೈಕಿ ಜನವರಿ 8ರ ವರೆಗೆ ಒಟ್ಟು 1035 ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದು, ಅರ್ಹರಿಗೆ ಜ. 12ರಂದು ನಿರೋದ್ಯೋಗ ಭತ್ಯೆಯನ್ನು ಡಿಬಿಟಿ ಮೂಲಕ ಜಮೆ ಆಗಲಿದೆ ಎಂದರು.ರಾಜ್ಯದಲ್ಲಿ 49 ಸಾವಿರ ನೋಂದಣಿ

ಈ ಯೋಜನೆಯಡಿ ರಾಜ್ಯದಲ್ಲಿ 49 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಯುವಕರು ಈ ಯೋಜನೆಯ ಫಲಾನುಭವ ಪಡೆಯಲಿದ್ದಾರೆ. ನೋಂದಣಿ ಆದವರು ಉದ್ಯೋಗ ಪಡೆಯುವವರೆಗೆ ಅಥವಾ 2 ವರ್ಷಗಳು ಅಥವಾ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಭತ್ಯೆ ಪಡೆಯಲಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲ ಉದ್ಯೋಗಕಾಂಕ್ಷಿಗಳಿಗೂ ಕೆಲಸ ನೀಡುವ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.ನಮ್ಮ ಸರ್ಕಾರ ಕೌಶಲ್ಯಾಭಿವೃದ್ದಿಗೆ ಹೆಚ್ಚು ಒತ್ತು ನೀಡಲು ಚಿಂತನೆ ನಡೆಸಿದೆ. ಯುವಕರಿಗೆ ಕೌಶಲ್ಯ ಅಭಿವೃದ್ಧಿ ಬಹಳ ಮುಖ್ಯ ಏಕೆಂದರೆ ಇದು ಉದ್ಯೋಗಶೀಲರಾಗಲು ಸಹಾಯ ಮಾಡುತ್ತದೆ. ಯುವಕರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುವ ತರಬೇತಿ ಮತ್ತು ದೃಢೀಕರಣ ಕಾರ್ಯಕ್ರಮಗಳು ನೀಡಲು ತಯಾರಿ ನಡೆಸಿದೆ. ಉದ್ಯೋಗದ ಬೇಡಿಕೆಯಿರುವ ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳುವುದರಿಂದ ಯುವಕರು ಹೆಚ್ಚು ಉದ್ಯೋಗಶೀಲರಾಗಲು ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತಾರೆ ಎಂದರು.

ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಯುವಕರ ಈ ಅಂತರವನ್ನು ಕಡಿಮೆ ಮಾಡಲು ಮತ್ತು ಉದ್ಯೋಗಗಳಿಗೆ ಸಜ್ಜಾಗಲು ಸಹಾಯ ಮಾಡುತ್ತವೆ. ಯುವಕರು ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳುತ್ತಾರೆ, ಅವರು ತಮಗಾಗಿ ಮತ್ತು ಇತರರಿಗೆ ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತಾರೆ ಎಂದು ಹೇಳಿದರುಈ ವೇಳೆ “ಯುವನಿಧಿ” ಯೋಜನೆಯ ಕುರಿತ ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್,ಉದ್ಯೋಗ ವಿನಿಮಯ ಅಧಿಕಾರಿ ಪ್ರಸಾದ್,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್.ಮಂಜುನಾಥ್, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೆಂಕಟಾಚಲಪತಿ ಮತ್ತಿತರರು ಇದ್ದರು.