ಜನವರಿ 14, 15ರಂದು ನಿಜಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸವ

| Published : Dec 30 2024, 01:01 AM IST

ಸಾರಾಂಶ

ನಿಜಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸವ ಜ. 14 ಮತ್ತು 15ರಂದು ಎರಡು ದಿನಗಳ ಕಾಲ ಹಾವೇರಿಯ ನರಸೀಪುರ ಗುರುಪೀಠದಲ್ಲಿ ನಡೆಯಲಿದೆ ಎಂದು ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ರಾಜು ಜಡಮಲಿ ಹೇಳಿದರು.

ರಾಣಿಬೆನ್ನೂರು: ನಿಜಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸವ ಜ. 14 ಮತ್ತು 15ರಂದು ಎರಡು ದಿನಗಳ ಕಾಲ ಹಾವೇರಿಯ ನರಸೀಪುರ ಗುರುಪೀಠದಲ್ಲಿ ನಡೆಯಲಿದೆ ಎಂದು ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ರಾಜು ಜಡಮಲಿ ಹೇಳಿದರು.

ಇಲ್ಲಿಯ ಶ್ರೀರಾಮನಗರದ ಶಿರಡಿ ಸಾಯಿಬಾಬಾ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಿಜಶರಣ ಅಂಬಿಗ ಚೌಡಯ್ಯನವರ ಜಾತ್ರೋತ್ಸವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅತ್ಯಂತ ನಿರ್ಭಿಡೆಯ ಸಮಾಜ ಸುಧಾರಕ, ಆಧ್ಯಾತ್ಮಿಕ ಅನುಭಾವಿಯಾಗಿದ್ದ ಚೌಡಯ್ಯ ಮೂಲತಃ ನಿಜಶರಣರಾಗಿದ್ದರು. ಆತನಲ್ಲಿ ಬಸವಣ್ಣನವರ ವೈಚಾರಿಕತೆ, ಅಲ್ಲಮಪ್ರಭುವಿನ ಅನುಭಾವಿಕ ನಿಲುವು ಬೆರೆತು-ವಿಶಿಷ್ಟ ಅನುಭವ ಮತ್ತು ಅನುಭಾವಗಳೆರಡೂ ಸೇರಿ ಮಹಾತ್ಮನೆನಿಸಿಕೊಂಡವನು. ತಾಲೂಕಿನ ಚೌಡಯ್ಯದಾನಪುರದ ತುಂಗಭದ್ರಾ ನದಿಯ ತಟದಲ್ಲಿ ಐಕ್ಯರಾಗಿರುವ ಅಂಬಿಗರ ಚೌಂಡಯ್ಯನು ಬಸವಣ್ಣನವರ ಸಮಕಾಲೀನರಾಗಿ ಕನ್ನಡ ಸಾಹಿತ್ಯದಲ್ಲಿ ಬಂಡಾಯದ ಮೊದಲ ಹೆಜ್ಜೆಗಳನ್ನು ಅತ್ಯಂತ ಸ್ಪಷ್ಟವಾಗಿ ಛಾಪಿಸಿದ ವಚನಕಾರರಾಗಿದ್ದರು. ಬಸವಣ್ಣನವರ ವಚನ ಚಳವಳಿಗೆ ಮುಖ್ಯ ಆಧಾರಸ್ತಂಭ ಆಗಿದ್ದ ಅವರು, ಇತರ ಕೆಳ ವರ್ಗಗಳ ಶರಣರು ಮೂಕರಾಗುವಂತೆ ಇರಬೇಕಾದ ಸಮಯದಲ್ಲಿ ಬಸವಣ್ಣನವರ ಪ್ರಭಾವ ಪ್ರೇರಣೆಯಿಂದ ಕನ್ನಡ ಸಾಹಿತ್ಯಕ್ಕೆ ಸತ್ವಶಾಲಿಯಾದ ವಚನಗಳನ್ನು ನೀಡಿ, ಚೌಡಯ್ಯನವರು ದಾರಿದೀಪವಾಗಿದ್ದವರು. ಅಂಥವರ ವಚನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲು ಸರ್ವರೂ ಮುಂದಾಗೋಣ ಎಂದರು.

ನಿವೃತ್ತ ಶಿಕ್ಷಕ ಆರ್.ಎಚ್. ಐರಣಿ, ವಕೀಲರಾದ ಎಂ.ಬಿ. ಚಿನ್ನಪ್ಪನವರ, ಹೊನ್ನಪ್ಪ ತಿಮ್ಮೇನಹಳ್ಳಿ, ಸಮಾಜ ಮುಖಂಡರಾದ ಫಕ್ಕೀರಪ್ಪ ತುಮ್ಮಿನಕಟ್ಟಿ, ಕರಬಸಪ್ಪ ಬಾರ್ಕಿ, ಕಾಳಪ್ಪ ಅಂಬಿಗೇರ, ಕೊಟ್ರೇಶ ಕುದರಿಹಾಳ, ರಾಜು ರಟ್ಟಿಹಳ್ಳಿ, ಮೂರ್ತಿ ಸುಣಗಾರ, ಆಂಜನೇಯ ಬಾಳಿಕಾಯಿ, ಹಾಲೇಶ ಜಾಡರ ಮತ್ತಿತರರಿದ್ದರು.