16ರಂದು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ

| Published : Oct 13 2023, 12:15 AM IST

ಸಾರಾಂಶ

ಪ್ರತಿ 2 ತಿಂಗಳಿಗೊಮ್ಮೆ ಮೇಳ ಆಯೋಜಿಸುವ ಗುರಿ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ

ಪ್ರತಿ 2 ತಿಂಗಳಿಗೊಮ್ಮೆ ಮೇಳ ಆಯೋಜಿಸುವ ಗುರಿ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು, ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಅನುಕೂಲವಾಗುವಂತೆ ಬೃಹತ್ ಉದ್ಯೋಗ ಮೇಳವನ್ನು ಅ.16ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು, ಉದ್ಯೋಗಕ್ಕಾಗಿ ವೇದಿಕೆ ಒದಗಿಸಲು ಪ್ರತಿ 2 ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜಿಸುವ ಗುರಿ ಜಿಲ್ಲಾಡಳಿತ ಹೊಂದಿದೆ ಎಂದರು.

ಕನಿಷ್ಠ ಎಸ್ಸೆಸ್ಸೆಲ್ಸಿಯಿಂದ ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಉದ್ಯೋಗದಾತ 150ಕ್ಕೂ ಹೆಚ್ಚು ಕಂಪನಿಗಳನ್ನು ಮೇಳಕ್ಕೆ ಆಹ್ವಾನಿಸಲಾಗುತ್ತಿದೆ. ಐಟಿ, ಆಟೋ ಮೊಬೈಲ್‌, ಖಾಸಗಿ ಬ್ಯಾಂಕಿಂಗ್‌, ಟೆಕ್ಸಟೈಲ್‌, ಫೈನಾನ್ಸ್‌, ಆರೋಗ್ಯ, ಫಾರ್ಮಸಿ, ಜ್ಯುಯಲರಿ, ವಿಮಾ ಕಂಪನಿ, ಫರ್ಟಿಲೈಸರ್ ಹೀಗೆ ನಾನಾ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.

ಉದ್ಯೋಗ ಮೇಳವು ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿ, ಯುವ ಜನರು ತಮ್ಮ ಸ್ವವಿರ, ಶೈಕ್ಷಣಿಕ ಮೂಲಕ ದಾಖಲಾತಿಗಳೊಂದಿಗೆ ಮೇಳ ನಡೆಯುವ ಹೈಸ್ಕೂಲ್ ಮೈದಾನದಲ್ಲಿ ಹಾಜರಾಗಬೇಕು. ಕಂಪನಿಯವರು ಪರಿಶೀಲನೆ, ನೇರ ಸಂದರ್ಶನ ನಡೆಸಿ, ಸ್ಥಳದಲ್ಲೇ ನೇಮಕಾತಿ ಆದೇಶ ನೀಡುವರು.ನಿರುದ್ಯೋಗಿಗಳು, ವಿದ್ಯಾರ್ಥಿಗಳು ಕ್ಯೂಆರ್‌ ಕೋಡ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ

ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಇತರರು ಇದ್ದರು. ಇಸ್ರೇಲ್‌ನಲ್ಲಿ ಜಿಲ್ಲೆಯ ಇಬ್ಬರೂ ಮಹಿಳೆಯರು ಸುರಕ್ಷಿತ

ದಾವಣಗೆರೆ: ಗಾಜಾದ ಹಮಾಸ್ ಉಗ್ರರ ದಾಳಿಗೆ ತುತ್ತಾಗಿರುವ ಇಸ್ರೇಲ್‌ನಲ್ಲಿರುವ ದಾವಣಗೆರೆಯ ಹೀಲ್ಡಾ ಮೊಂಥೇರೋ, ಜಗಳೂರು ತಾ. ದೊಣೆಹಳ್ಳಿ ಗ್ರಾಮದ ಪ್ರಿಯದರ್ಶಿನಿ ಸುರಕ್ಷಿತವಾಗಿದ್ದು, ಈಗಾಗಲೇ ಇಬ್ಬರನ್ನೂ ಜಿಲ್ಲಾಡಳಿತ ಸಂಪರ್ಕಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ಇಸ್ರೇಲ್ ನಲ್ಲಿ ಸುರಕ್ಷಿತ ಸ್ಥಳದಲ್ಲಿರುವ ಇಬ್ಬರನ್ನೂ ಸಂಪರ್ಕಿಸಿ, ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಏನಾದರೂ ಸಹಾಯದ ಅಗತ್ಯವಿದ್ದಲ್ಲಿ ಇಸ್ರೇಲ್‌ನ ರಾಯಭಾರಿ ಕಚೇರಿ ಮೂಲಕ ನೆರವು ಒದಗಿಸಲಾಗುವುದು. ಇಬ್ಬರೂ ಹೆಣ್ಣು ಮಕ್ಕಳು ಸುರಕ್ಷಿತವಿದ್ದು,ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

............................................ 22ರಿಂದ ಅಂತಾರಾಷ್ಟ್ರೀಯ ಟೆನ್ನಿಸ್ ಟೂರ್ನಿ

ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಷನ್‌ನಿಂದ ದಾವಣಗೆರೆ ನಗರದಲ್ಲಿ ಅ.22ರಿಂದ 29ರವರೆಗೆ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂವಿ.ವೆಂಕಟೇಶ ತಿಳಿಸಿದರು. ಪಂದ್ಯಾವಳಿಯಲ್ಲಿ ಅಮೆರಿಕ, ಸ್ವಿಜರ್ ಲ್ಯಾಂಡ್‌, ಸ್ವೀಡನ್‌, ಆಸ್ಟ್ರೇಲಿಯಾ ಸೇರಿ ಇನ್ನೂ ಅನೇಕ ದೇಶಗಳಿಂದ ಸುಮಾರು 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಟೂರ್ನಿಗಾಗಿ ಇಲ್ಲಿನ ಹೈಸ್ಕೂಲ್ ಮೈದಾನದ 4 ಸಿಂಥೆಟಿಕ್ ಅಂಕಣಗಳ ಸಿದ್ಧಪಡಿಸಲಾಗುತ್ತಿದೆ ಎಂದರು.