ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅದಮ್ಯ ರಂಗಶಾಲೆ, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಸದ್ಭಾವನಾ ಪ್ರಶಸ್ತಿ ಪ್ರದಾನ ಹಾಗೂ ಭಸ್ಮಾಸುರ ಪ್ರಸಂಗ ಮಕ್ಕಳ ನಾಟಕ ಪ್ರದರ್ಶನ ಸಮಾರಂಭವು ಜ.17ರ ಸಂಜೆ 5ಕ್ಕೆ ವಿಜಯನಗರದ ಒಂದನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.ಸಮಾರಂಭವನ್ನು ವಿಧಾನ ಪರಿಷತ್ತಿನ ಶಾಸಕ ಡಾ.ಡಿ.ತಿಮ್ಮಯ್ಯ ಉದ್ಘಾಟಿಸಲಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು ಅಧ್ಯಕ್ಷತೆ ವಹಿಸುವರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರೊ.ಕೆ. ಟಿ. ವೀರಪ್ಪ ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಗಾಂಧಿ ಸದ್ಭಾವನ ಪ್ರಶಸ್ತಿ ಪ್ರದಾನ ಮಾಡುವರು.
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ನುಡಿಗಳನ್ನಾಡುವರು.ಗಾಂಧಿ ಸದ್ಭಾವನ ಪ್ರಶಸ್ತಿಗೆ ಆಯ್ಕೆ : ಅದಮ್ಯ ರಂಗಶಾಲೆಯ ವತಿಯಿಂದ ಪ್ರತಿವರ್ಷ ಗಾಂಧಿ ಸದ್ಭಾವನ ಪ್ರಶಸ್ತಿ ಕೊಡ ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಎಂಟು ಮಂದಿ ಗಣ್ಯ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಾಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ವಿಜಯನಗರ ಉಪ ವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಜಿ.ಎಸ್. ಗಜೇಂದ್ರ ಪ್ರಸಾದ್, ನಾಗಮಂಗಲದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮ್, ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಮಹೇಶ್ ಎಂ. ಭಗೀರಥ, ಪಿರಿಯಾಪಟ್ಟಣದ ಕಲ್ಪವೃಕ್ಷ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ. ಪ್ರಶಾಂತ್ ಗೌಡ, ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಸೋಮಣ್ಣ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶ್ರೀ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ. ವಾಸವಾಂಬ, ಮಂಡ್ಯದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹಾಗೂ ಕವಯಿತ್ರಿ ಎಚ್.ಆರ್. ಕನ್ನಿಕಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ನಾಟಕ ಪ್ರದರ್ಶನ: ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಅದಮ್ಯ ರಂಗಶಾಲೆಯ ವಾರಾಂತ್ಯ ರಂಗತರಬೇತಿ ಶಿಬಿರದ ಮಕ್ಕಳು ಅಭಿನಯಿಸುವ ಲೋಕನಾಥ ಸೋಗುಂ ಅವರ ಸಂಗೀತ ಮತ್ತು ನಿರ್ದೇಶನವಿರುವ ''''''''ಭಸ್ಮಾಸುರ ಪ್ರಸಂಗ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ ಎಂದು ಚಂದ್ರು ಮಂಡ್ಯ ಅವರು ಹೇಳಿದ್ದಾರೆ.