18ರಂದು ಮಾತಾ ಅಮೃತಾನಂದಮಯಿ ಮಠದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ

| Published : Feb 15 2025, 12:31 AM IST

18ರಂದು ಮಾತಾ ಅಮೃತಾನಂದಮಯಿ ಮಠದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರಿಂದ ಪ್ರಾಣ ಪ್ರತಿಷ್ಠೆ ಮಾಡಲ್ಪಟ್ಟ, ಒಂದೇ ಶಿಲೆಯಲ್ಲಿ ರೂವುಗೊಂಡ, ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ನಾಲ್ಕು ದ್ವಾರಗಳ ಮೂಲಕ ದರ್ಶನ ಮಾಡಬಹುದಾದ ಶಿವ, ಪಾರ್ವತಿ ದೇವಿ, ಗಣಪತಿ ಮತ್ತು ಸುಬ್ರಹ್ಮಣ್ಯ ವಿಗ್ರಹವುಳ್ಳ ವಿಶಿಷ್ಟ ಕ್ಷೇತ್ರ ಇದಾಗಿದ್ದು, ದೋಷ ನಿವಾರಣಾ ಕ್ಷೇತ್ರವಾಗಿ ಜನಜನಿತವಾಗಿದೆ. ಕಾರ್ಯಕ್ರಮವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಲಲಿತಾ ಅಷ್ಟೋತ್ತರ ಪಠಣದೊಂದಿಗೆ ಆರಂಭಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಮಂಗಳೂರು

ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಫೆ.18ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಂಗಳೂರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್‌ ಅಮೀನ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರಿಂದ ಪ್ರಾಣ ಪ್ರತಿಷ್ಠೆ ಮಾಡಲ್ಪಟ್ಟ, ಒಂದೇ ಶಿಲೆಯಲ್ಲಿ ರೂವುಗೊಂಡ, ನಾಲ್ಕು ದಿಕ್ಕುಗಳಿಗೆ ಅಭಿಮುಖವಾಗಿ ನಾಲ್ಕು ದ್ವಾರಗಳ ಮೂಲಕ ದರ್ಶನ ಮಾಡಬಹುದಾದ ಶಿವ, ಪಾರ್ವತಿ ದೇವಿ, ಗಣಪತಿ ಮತ್ತು ಸುಬ್ರಹ್ಮಣ್ಯ ವಿಗ್ರಹವುಳ್ಳ ವಿಶಿಷ್ಟ ಕ್ಷೇತ್ರ ಇದಾಗಿದ್ದು, ದೋಷ ನಿವಾರಣಾ ಕ್ಷೇತ್ರವಾಗಿ ಜನಜನಿತವಾಗಿದೆ. ಕಾರ್ಯಕ್ರಮವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಲಲಿತಾ ಅಷ್ಟೋತ್ತರ ಪಠಣದೊಂದಿಗೆ ಆರಂಭಿಸಲಿದ್ದಾರೆ ಎಂದು ಹೇಳಿದರು.

ಮುಂಜಾನೆ 5.30ರಿಂದ ಮಂಗಳೂರಿನ ರುದ್ರಾಧ್ಯಾಯಿ ತಂಡದವರಿಂದ ರುದ್ರಪಠಣ ಮತ್ತು ವೇದಮಂತ್ರ ಪಠಣ, ರುದ್ರಪೂಜೆ ನಡೆಯಲಿದೆ. ಬಳಿಕ ಡಾ. ವಸಂತ ಕುಮಾರ ಪೆರ್ಲ ಅವರು ಬ್ರಹ್ಮಸ್ಥಾನದ ಬಗ್ಗೆ ರಚಿಸಿರುವ ಗೀತೆ ಬಿಡುಗಡೆಯಾಗಲಿದೆ. ಬೆಳಗ್ಗೆ 9ರಿಂದ ಸಾರ್ವಜನಿಕ ಮಹಾಧನ್ವಂತರಿ ಹೋಮ ಮತ್ತು ಭಕ್ತರು ಸ್ವತಃ ತಮ್ಮ ಶ್ರೇಯೋಭಿವೃದ್ಧಿಗಾಗಿ ತಾವೇ ಪೂಜೆಗೈದು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ವಿಶೇಷ ಸರ್ವೈಶ್ವರ್ಯ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.

ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಡಾ. ವಸಂತ ಕುಮಾರ ಪೆರ್ಲ ಮಾತನಾಡಿ, ಪ್ರತಿಷ್ಠಾ ದಿನದ ಅಂಗವಾಗಿ ಅಮ್ಮನವರ ಭಕ್ತರಿಂದ ವಿಶೇಷ ‘ಲೇಖನ ಯಜ್ಞ’ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2ರಿಂದ 3.30ರ ತನಕ ಭಜನೆ, ಸಂಜೆ 4ರಿಂದ 5.30ರ ತನಕ ಹರಿಕಥೆ ಕಥಾಪ್ರವಚನ ಶಿವಪಾರ್ವತಿ ಕಲ್ಯಾಣ, ಬಳಿಕ ಕಾಸರಗೋಡು, ದ.ಕ. ಮತ್ತು ಉಡುಪಿ ಜಿಲ್ಲೆಯ ಆಯ್ದ ಹಿರಿಯ ಆರು ಮಂದಿ ಜ್ಯೋತಿಷಿಗಳನ್ನು ಗೌರವಿಸುವ ಕಾರ್ಯಕ್ರಮವಿದೆ. ಸಂಜೆ 5.30ಕ್ಕೆ ಕಲಶಪೂಜೆ, ಮಹಾ ಅಭಿಷೇಕ, ಅಲಂಕಾರ ಪೂಜೆ ಮತ್ತು ದೀಪಾರಾಧನೆ, ಸಂಜೆ 7ರಿಂದ ಜಿಲ್ಲೆಯ ವಿವಿಧ ಭಜನಾ ತಂಡದವರಿಂದ ಕುಣಿತ ಭಜನೆ ಜರುಗಲಿದೆ. ರಾತ್ರಿ 8.30ಕ್ಕೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿಷ್ಠಾ ದಿನದ ವಿಶೇಷ ಸೇವೆಗಳಾಗಿ ಕಲಶಪೂಜೆ, ಉದಯಾಸ್ತಮಾನ ಪೂಜೆ, ಅಲಂಕಾರ ಪೂಜೆ, ಸರ್ವಸೇವೆ, ಮಹಾಧನ್ವಂತರಿ ಹೋಮ, ಸರ್ವೈಶ್ವರ್ಯ ಪೂಜೆ ನೆರವೇರಲಿದೆ. ದೂರದ ಸ್ಥಳಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಗರದ ಲೇಡಿಹಿಲ್‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬೋಳೂರಿನ ಮಠದವರೆಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಾತಾ ಅಮೃತಾನಂದಮಿಯಿ ಸೇವಾ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ಎಸ್‌., ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಾ. ದೇವದಾಸ ಪುತ್ರನ್‌, ಸಂಘಟನಾ ಕಾರ್ಯದರ್ಶಿ ಯೋಗೀಶ್‌ ಸಾಲ್ಯಾನ್‌ ಇದ್ದರು.