ಸಾರಾಂಶ
ಗ್ರಾಮೀಣ ಸೊಗಡಿನ ಚಿತ್ರ ಇದಾಗಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುವ ಭರವಸೆ ವ್ಯಕ್ತವಾಗಿದೆ. ಜಿಲ್ಲೆಯ ನಟಿ ಮಧುರಗೌಡ ನಾಯಕಿಯಾಗಿ ನಟಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರತಿಭಾ ಅವರು ನಿರ್ಮಿಸಿ ನಿರ್ದೇಶಿಸಿ ತಯಾರಿಸಿರುವ ‘ಸಂಭವಾಮಿ ಯುಗೇ ಯುಗೇ’ ಚಲನಚಿತ್ರ ಜೂ. 21ಕ್ಕೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಾಗಿ ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದಾರೆ.ಕುಶಾಲನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾಮೀಣ ಸೊಗಡಿನ ಚಿತ್ರ ಇದಾಗಿದ್ದು ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುವ ಭರವಸೆಯಿದೆ. ಕಣ್ಣು ಕಾಣದ ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯಕ್ಕಾಗಿ ಹೋರಾಡುವ ಕಥೆಯನ್ನು ಒಳಗೊಂಡಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಉದಯೋನ್ಮುಖ ನಟಿಯಾದ ಮಧುರ ಗೌಡ ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕುಟುಂಬ ಸಮೇತವಾಗಿ ನೋಡಬಹುದಾದ ಹಳ್ಳಿಗಾಡಿನ ಕಥೆ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಾಯಕ ನಟ ಜಯ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.ನಾಯಕಿ ನಟಿ ಕುಶಾಲನಗರದ ಮಧುರಗೌಡ ಮಾತನಾಡಿ, ನಾನು ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವಿದ್ದರೂ , ಚಿತ್ರರಂಗ ನನಗೆ ಹೊಸ ಕ್ಷೇತ್ರವಾಗಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಗ್ರಾಮೀಣ ಭಾಗದ ಮುಗ್ದ ಹುಡುಗಿಯ ಪ್ರಮುಖ ಪಾತ್ರ ನನ್ನದು ಎನ್ನುವ ಖುಷಿಯನ್ನು ಹಂಚಿಕೊಂಡರು. ಎಲ್ಲರೂ ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಿಸಿ ಶುಭಹಾರೈಸುವಂತೆ ಕೋರಿದರು.
ಪೊಲೀಸ್ ಪಾತ್ರಧಾರಿ ವೆಂಕಟೇಶ್ ಪ್ರಸಾದ್, ವಿಲನ್ ಪಾತ್ರಧಾರಿ ಅಭಯ್ ಪುನಿತ್, ಮತ್ತೋರ್ವ ನಾಯಕಿ ನಿಶಾ ರಜಪೂತ್ ಮಾತನಾಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.ಚಿತ್ರದ ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ ಮತ್ತಿತರರು ಇದ್ದರು.