ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಅಕ್ರಮ ಸಕ್ರಮ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮಾ.೨೬ ರಂದು ಮಂಗಳವಾರ ಬೆಳಗ್ಗೆ ೧೧.೩೦ ಗಂಟೆಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ನಗರದ ಚಾಮರಾಜೇಶ್ವರ ಉದ್ಯಾನವನದಲ್ಲಿ ನಡೆದ ಜಿಲ್ಲೆಯ ರೈತರ ಪದಾಧಿಕಾರಿಗಳು ಮತ್ತು ಕೃಷಿ ಪಂಪ್ ಸೆಟ್ ಬಳಕೆದಾರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಪ್ರತಿಭಟನೆಗೆ ರೈತರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡುವಂತೆ ಮನವಿ ಮಾಡಿದರು. ಕೃಷಿ ಪಂಪ್ ಸೆಟ್‌ಗಳಿಗೆ ೧೦ ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು. ಹಗಲು ವೇಳೆ ಸರ್ಕಾರದ ಆದೇಶದಂತೆ ಸಮರ್ಪಕ ವಿದ್ಯುತ್ ನೀಡುವಲ್ಲಿ ವಿಳಂಬ ನೀತಿ ರೈತರಿಗೆ ಸೋಲಾರ್ ಪಂಪ್ಸೆಟ್ ಅನ್ನು ವೈಯಕ್ತಿಕವಾಗಿ ಅಳವಡಿಸಿಕೊಳ್ಳಲು ಇಲಾಖೆ ಪ್ರೇರೇಪಿಸುತ್ತಿರುವುದು ಕಳೆದ ಸಾಲಿನಲ್ಲಿ ಇದ್ದಂತೆ ಅಕ್ರಮ ಸಕ್ರಮವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಹೊಸ ವಿದ್ಯುತ್ ಸಂಪರ್ಕ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ಆದೇಶವಿದೆ ಎಂದು ಯಾವುದೇ ನೋಂದಣಿಯನ್ನು ಮಾಡಿಕೊಳ್ಳದೆ ಸ್ವಂತಕ್ಕೆ ಎರಡು ಮೂರು ಲಕ್ಷ ಕಟ್ಟಿಸಿ ಮತ್ತು ಸಂಪರ್ಕ ಪಡೆಯಲು ಹೇಳುತ್ತಿರುವುದು ಇಲಾಖೆ ಕಾಡಂಚಿನ ಪ್ರದೇಶಗಳಿಗೆ ಸಮರ್ಪಕವಾಗಿ ಹಗಲು ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯ ಕಾಡು ಪ್ರಾಣಿಗಳಿಂದ ರೈತರಿಗೆ ತೊಂದರೆ ಆಗುತ್ತಿದೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಯಲು ಪೂರಕವಾಗುವಂತೆ ಇಲಾಖೆಯಲ್ಲಿ ಟಿ.ಸಿಗಳು ಸುಟ್ಟು ಹೋದರೆ ೭೨ ಗಂಟೆಯಲ್ಲಿ ದುರಸ್ಥಿ ಆಗಬೇಕೆಂಬ ನಿಯಮವಿದ್ದರೂ ಇಲಾಖೆ ಕೆಳ ಹಂತದ ಅಧಿಕಾರಿಗಳು ತೀವ್ರ ವಿಳಂಬ ಮಾಡುತ್ತಿದ್ದಾರೆ. ಜಮೀನುಗಳಲ್ಲಿ ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಿರುವ ಬಗ್ಗೆ ಜಂಗಲ್ ಕಟಿಂಗ್ ಮಾಡದಿರುವುದು ಹೆಚ್ಚುವರಿ ಟಿಸಿಯನ್ನು ತಕ್ಷಣ ನೀಡುವ ಬಗ್ಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಮೊದಲೇ ಇದ್ದಂತಹ ೨೩,೦೦೦ ರು.ಗಳನ್ನು ಕಟ್ಟಿಸಿಕೊಂಡು ಸರ್ಕಾರವೇ ಉಳಿದ ಹಣವನ್ನು ತುಂಬಿ ರೈತರಿಗೆ ಸಂಪರ್ಕ ನೀಡಲಿ. ಹೊಸ ಕೃಷಿ ಮಾಡುವ ಯುವಕರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಹೊಸ ಕೃಷಿ ಮಾಡುವ ರೈತರಿಗೆ ಈ ನೀತಿ ನಿಯಮಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ ತಕ್ಷಣ ಈ ನಿಯಮವನ್ನು ಕೈ ಬಿಟ್ಟು ಯಥಾ ಸ್ಥಿತಿ ನಿಯಮವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪ್ರಮುಖ ಅಧಿಕಾರಿಗಳೊಂದಿಗೆ ತಕ್ಷಣ ಸಭೆ ನಡೆಸಬೇಕು ಎಂಬ ವಿಚಾರಗಳು ಇಟ್ಟುಕೊಂಡು ಪ್ರತಿಭಟನೆ ಧರಣಿಯನ್ನು ಹಮ್ಮಿಕೊಳ್ಳಲಾಗಿದ್ದು ರೈತರ ಹಿತಾಸಕ್ತಿಗಾಗಿ ರೈತನ ಕೃಷಿ ಉಳಿವಿಗಾಗಿ ಕೃಷಿ ಪಂಪ್ ಸೆಟ್ ಬಳಕೆದಾರ ರಕ್ಷಣೆಗಾಗಿ ಜಿಲ್ಲೆಯ ಕೃಷಿ ಪಂಪ್ ಸೆಟ್ ಬಳಕೆದಾರರು ಹೊಸ ಕೊಳವೆಬಾವಿ ಕೊರೆದಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಗೆ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ಮನವಿ ಮಾಡಿದರು.
ಜಿಲ್ಲಾ ಪದಾಧಿಕಾರಿಗಳು:ಸಭೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷರಾಗಿ ಮೂಡಲಪುರ ಹಾಲಿನ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜನ್ನೂರು ಶಾಂತರಾಜು, ಜಿಲ್ಲಾ ಉಪಾಧ್ಯಕ್ಷ ಮಲೆಯೂರು ಪ್ರವೀಣ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ ಕುಮಾರ್, ತಾಲೂಕು ಅಧ್ಯಕ್ಷರಾಗಿ ಅರಳಿಕಟ್ಟೆ ಕುಮಾರ್, ತಾಲೂಕು ಸಂಚಾಲಕ ಕಿಳಲಿಪುರ ಶ್ರೀಕಂಠಸ್ವಾಮಿ ಅರಳಿ ಕಟ್ಟೆ ಗ್ರಾಮ ಘಟಕದ ನೂತನ ಅಧ್ಯಕ್ಷ ಪ್ರಭುಸ್ವಾಮಿಯನ್ನು ಆಯ್ಕೆ ಮಾಡಲಾಯಿತು. ಮಲೆಯೂರು ಹರ್ಷ, ಮಹೇಂದ್ರ, ಬಸವರಾಜಪ್ಪ, ಉಡಿಗಾಲ ಮಂಜುನಾಥ್, ಅರಳೀಕಟ್ಟೆ ಕುಮಾರ್, ದೇವನೂರು ನಾಗೇಂದ್ರ, ಮಹೇಶ್, ಕೊಣನೂರು ವಿಶ್ವನಾಥ, ನಂದೀಶ್, ಪ್ರಭುಸ್ವಾಮಿ, ಉಡಿಗಾಲ ಮಹದೇವಸ್ವಾಮಿ, ಸುಧಾಕರ್, ಸಿದ್ದಪ್ಪ ಇತರರು ಭಾಗವಹಿಸಿದ್ದರು.