ಸಾರಾಂಶ
ಕಳೆದ 32 ತಿಂಗಳಿಂದ ನಾಯಕನಹಟ್ಟಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯು ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿತ್ತು. ಈಗ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ. 28ಕ್ಕೆ ದಿನ ನಿಗದಿಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿಕಳೆದ 32 ತಿಂಗಳಿಂದ ನಾಯಕನಹಟ್ಟಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯು ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿತ್ತು. ಈಗ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ. 28ಕ್ಕೆ ದಿನ ನಿಗದಿಮಾಡಲಾಗಿದೆ.2015ರಲ್ಲಿ ನಾಯಕನಹಟ್ಟಿಯನ್ನು ಪಟ್ಟಣ ಪಂಚಾಯಿತಿಯಾಗಿ ಸರ್ಕಾರ ಮೇಲ್ದರ್ಜೆಗೇರಿಸಿ ಆದೇಶಿಸಿದ ತರುವಾಯ ಜನಸಂಖ್ಯೆಗೆ ಅನುಗುಣವಾಗಿ ಸರಿದೂಗಿಸಲು ಸುತ್ತಮುತ್ತಲಿನ ಕೆಲ ಗ್ರಾಮಗಳನ್ನು ಒಳಗೊಂಡಂತೆ ಒಟ್ಟು 16 ವಾರ್ಡುಗಳ ರಚನೆ ಮಾಡಲಾಗಿತ್ತು. 2021ರಲ್ಲಿ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಗೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಒಟ್ಟು 16 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ವಾರ್ಡುಗಳಲ್ಲಿ ಗೆದ್ದು, ಆಡಳಿತ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟಿಕೊಂಡಿತ್ತು. ಪಕ್ಷೇತರರಾಗಿ ಚನ್ನಬಸಯ್ಯನಹಟ್ಟಿ ನೀಲಮ್ಮ ಗೆದ್ದಿದ್ದರು. ನೀಲಮ್ಮ ನಂತರ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿ 9 ಸ್ಥಾನಗಳನ್ನು ಪಡೆದು ಬಹುಮತ ಸಾಬೀತುಗೊಳಿಸಿ ಅಧಿಕಾರ ಹಿಡಿದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಪರಿಶಿಷ್ಟ ಜಾತಿಯಿಂದ ಮಹಿಳೆ ಮೀಸಲಾತಿ ಪ್ರಕಟಣೆ ಹೊರಡಿಸಿತ್ತು. ಕಡೆಗೆ ನೀಲಮ್ಮ ಅಧ್ಯಕ್ಷರಾಗಿ ಅಧಿಕಾರ ಪಡೆದಿದ್ದರು.2021 ನವೆಂಬರ್ ನಲ್ಲಿ ಎರಡನೇ ಅವಧಿ ಚುನಾವಣೆ ನಡೆದಾಗ ಕಾಂಗ್ರೆಸ್ ಒಟ್ಟು 11 ವಾರ್ಡುಗಳಲ್ಲಿ ಗೆದ್ದು ಬಹುಮತ ಪಡೆದುಕೊಂಡಿತ್ತು. ಪಕ್ಷೇತರರಾಗಿ 1ನೇ ವಾರ್ಡಿನ ದುರುಗಪ್ಪ, 9ನೇ ವಾರ್ಡಿನ ಆರ್. ರವಿಕುಮಾರ್, 11ನೇ ವಾರ್ಡಿನ ಸರ್ವಮಂಗಳ ಉಮಾಪತಿ ಗೆದ್ದಿದ್ದರು. ಬಿಜೆಪಿ ಕೇವಲ 2 ವಾರ್ಡುಗಳಲ್ಲಷ್ಟೇ ಜಯದ ನಗೆ ಬೀರಿತ್ತು.ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆಗೊಳಪಟ್ಟು ಸುದೀರ್ಘ ಅವಧಿ ಕಳೆಯಿತು. ಗೆದ್ದ ಅಭ್ಯರ್ಥಿಗಳು ಎರಡು ಮುಕ್ಕಾಲು ವರ್ಷಗಳ ಕಾಲ ಅಧಿಕಾರ ಇಲ್ಲದೇ ಕೈಕೈ ಹಿಸುಕಿಕೊಂಡು ಕಾಲ ತಳ್ಳಿದ್ದರು. ಸದಸ್ಯರ ನಿರೀಕ್ಷೆಯಂತೆ ಈಗ ಕಾಲ ಕೂಡಿಬಂದಿದೆ.