28ರಂದು ಶಿವದೂತ ಗುಳಿಗ ನಾಟಕ: ವಿಕ್ರಮ್ ಶೆಟ್ಟಿ
KannadaprabhaNewsNetwork | Published : Oct 26 2023, 01:01 AM IST
28ರಂದು ಶಿವದೂತ ಗುಳಿಗ ನಾಟಕ: ವಿಕ್ರಮ್ ಶೆಟ್ಟಿ
ಸಾರಾಂಶ
ದೈವವನ್ನೇ ಮುಖ್ಯವಾಗಿಟ್ಟುಕೊಂಡು ವಿಭಿನ್ನ ಶೈಲಿಯಲ್ಲಿ ನಾಟಕ ಮೂಡಲಿದೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಅ.28ರಂದು ಸಂಜೆ 6.30ಕ್ಕೆ ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ ದೇಶ, ವಿದೇಶಗಳಲ್ಲಿ ಮೆಚ್ಚುಗೆ ಪಡೆದ ಕನ್ನಡ ನಾಟಕ ಶಿವದೂತ ಗುಳಿಗ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಚಾಲಕ ಜಾದುಗಾರ್ ವಿಕ್ರಮ್ ಶೆಟ್ಟಿ ಹೇಳಿದರು. ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ನಾಟಕ ಅದ್ಭುತ ಹಾಗೂ ವಿಸ್ಮಯವಾಗಿದೆ. ದೈವವನ್ನೇ ಮುಖ್ಯವಾಗಿಟ್ಟುಕೊಂಡು ವಿಭಿನ್ನ ಶೈಲಿಯಲ್ಲಿ ನಾಟಕ ಮೂಡಲಿದೆ. ಈ ಶಿವದೂತ ಗುಳಿಗ ಅ.28ರ ರಾತ್ರಿ ಕಾಣಿಸುತ್ತಾನೆ ಎಂದರು. ಈಗಾಗಲೇ ಭಾರತದ ಅನೇಕ ಜಾಗದಲ್ಲಿ ಕಾಣಿಸಿ ಕೊಂಡಿರುವ ಈ ಗುಳಿಗ ನಂಬಿದ ಭಕ್ತರ ಉದ್ಧಾರಕ್ಕಾಗಿ ಶಿವಮೊಗ್ಗದ ಕುವೆಂಪು ಹೆಸರಿನ ನೆಲದಲ್ಲಿ ಆಶೀರ್ವಾದ ನೀಡಲು ತಯಾರಾಗಿ ನಿಂತಿದ್ದಾನೆ. ದೈವ ಮತ್ತು ದೇವರನ್ನು ಒಂದೇ ಎಂದು ನಂಬಿದ ನಮಗೆ ಕಣ್ಣಿಗೆ ಕಾಣಿಸಿಕೊಳ್ಳುವ ದೇವರೇ ನಮ್ಮ ಹತ್ತಿರದ ದೈವವಾಗಿದೆ. ಈ ಎಲ್ಲ ದೈವಗಳು ನಮ್ಮ ನಮ್ಮ ಮನೆತನಗಳ ಪೂರ್ವಿಕರೇ ಆಗಿವೆ. ನಮ್ಮ ಕಷ್ಟ ಪರಂಪರೆಯನ್ನು ತೊಲಗಿಸಲು ಆಗಾಗ ಆಗಮಿಸುತ್ತಲೇ ಇರುತ್ತವೆ. ಇಂಥ ಮಹಾನ್ ದೈವಗಳಲ್ಲಿ ಒಂದಾದ ಜಗತ್ತಿನ ಲಯಕರ್ತ ಶಿವನ ರುಂಡಮಾಲೆಯಲ್ಲಿ ಅಡಗಿದ್ದ ದುಷ್ಟರನ್ನು ನಾಶ ಮಾಡುವ, ಶಿಷ್ಟರ ರಕ್ಷಿಸುವ ಉದ್ದೇಶದಿಂದ ಆಗಾಗ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಮಾಹಿತಿ ನೀಡಿದರು. ರಂಗಪ್ರೇಮಿ ಕೆ.ಜಿ. ವೆಂಕಟೇಶ್ ಮಾತನಾಡಿ, ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು ಶಿವದೂತ ಗುಳಿಗ ನಾಟಕದ ನಿರ್ದೇಶನ ಮಾಡಿದ್ದಾರೆ. ಎ.ಕೆ. ವಿಜಯ್ ಸಂಗೀತ ನೀಡಿದ್ದಾರೆ. ಇದು ಗೌರವ ಪ್ರವೇಶವಾಗಿದ್ದು, ಟಿಕೆಟ್ ಬೆಲೆ ₹500 ಮತ್ತು ₹1000 ಇರುತ್ತದೆ. ಟಿಕೆಟ್ ಮತ್ತು ವಿವರಗಳಿಗೆ ಮೊ: 94481- 08222 ಮತ್ತು 80735-79575 ಇಲ್ಲಿಗೆ ಸಂಪರ್ಕಿಸಬಹುದು ಎಂದರು. ಮಂಗಳೂರಿನ ಪುರಭವನದಲ್ಲಿ ಆರಂಭವಾದ ಶಿವದೂತ ಗುಳಿಗ ನಾಟಕದ ಮೊದಲ ಹೆಜ್ಜೆಯಿಂದ ಹಿಡಿದು 517ನೇ ಪ್ರದರ್ಶನವಾಗಿದೆ. 37 ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಪ್ರಥಮ ಪ್ರದರ್ಶನದಿಂದಲೇ ಈ ನಾಟಕ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದರು. ಕಲಾ ಸಂಗಮ ತಂಡದ ಕಲಾವಿದರು ನಾಟಕದ ದೃಶ್ಯಾವಳಿಗಳಿಗೆ ಜೀವ ತುಂಬಿದ್ದಾರೆ. ಪರಮಾನಂದ ವಿ. ಸಾಲ್ಯಾನ್ ಅವರ ಸಂಭಾಷಣೆ ಗುರುದೇವ ಆರ್ಟ್ಸ್ ಬಂಟ್ವಾಳ, ಶರತ್ ಪೂಜಾರಿ ಮಾಲೆಮಾರ್ ವಸ್ತ್ರವಿನ್ಯಾಸ, ಹರೀಶ್ ಆಚಾರ್ಯ, ಚಂದ್ರಶೇಖರ ಶಿರ್ವ ಮಟ್ಟಾರ್ ರಂಗವಿನ್ಯಾಸವನ್ನು ಮಾಡಿದ್ದಾರೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕದ ಬೊಳ್ಳಿ ದೇವದಾಸ್ ಕಾಪಿಕಾಡ್, ಡಾ.ವೈಷ್ಣವಿ, ರವೀಂದ್ರ ಪ್ರಭು, ನರಸಿಂಹ ಕಿಣಿ, ವಿಶಾಲ್ ರಾಜ್ ಕೋಕಿಲ ಇವರ ಹಿನ್ನೆಲೆ ಸಂಗೀತವಿದ್ದು ಎ.ಕೆ. ವಿಜಯ್ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಗುಳಿಗನ ಪಾತ್ರವನ್ನು ಕಾಂತಾರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮಾಡಿದ್ದಾರೆ. ನಿತೇಶ್ ಕಿನ್ನಿಗೋಳಿ, ವಿನೋದ್‌ರಾಜ್ ಕೋಕಿಲ, ರಮೇಶ್ ಕಲ್ಕಡ್ಕ, ಕೀತ್ ಪುರ್ತಾಡೋ, ಧನು ಕುಲಾಲ್ ಬೊಳಂತೂರು, ಜಯರಾಮ ಅಚಾರ್ಯ ಮಂಜೇಶ್ವರ, ರಜತ್ ಕದ್ರಿ, ಶರಣ್ ಶೆಟ್ಟಿ ವೇಣೂರು, ಸಾಗರ ಮಡಂತ್ಯಾರ್, ರಕ್ಷಿತ ರಾವ್, ಕಾಜಲ್ ಬಂಗೇರ ನಾಟಕದಲ್ಲಿ ಅಭಿನಯಿಸಿದ್ದಾರೆ ಎಂದರು. - - - (-ಸಾಂದರ್ಭಿಕ ಚಿತ್ರ)