ಸಾರಾಂಶ
ನ. 29ರಂದು ಕಿರಿಯ ಶ್ರೀಗಳಿಗೆ ಶ್ರೀರಂಭಾಪುರಿ ಜಗದ್ಗುರುಗಳು ಹಾಗೂ ಪಂಚಪೀಠಗಳ ಶಿವಾಚಾರ್ಯರಿಂದ ನೂತನ ಪಟ್ಟಾಧಿಕಾರದ ವಿಧಿ-ವಿಧಾನಗಳು ನೆರವೇರುವವು. ಸಂಜೆ 4ಕ್ಕೆ ಪೂರ್ಣಕುಂಭ ಭಜನೆ, ಡೊಳ್ಳು, ವೀರಗಾಸೆ ವಿವಿಧ ವಾದ್ಯಮೇಳಗಳಿಂದ ಮಡಿವಾಳ ಶಿವಾಚಾರ್ಯರ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಯಲಿದೆ.
ಕಲಘಟಗಿ:
ಪಟ್ಟಣದಲ್ಲಿನ ಹನ್ನೆರೆಡು ಮಠದ ಕಿರಿಯ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಸಮಾರಂಭ ನ. 25ರಿಂದ 29ರ ವರೆಗೆ ನಡೆಯಲಿದೆ ಎಂದು ಹನ್ನೆರೆಡು ಮಠದ ರೇವಣಸಿದ್ದ ಶಿವಾಚಾರ್ಯರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮಾರಂಭದ ಪ್ರಚಾರ ಪತ್ರಿಕೆ ಬಿಡುಗಡೆ ಮಾತನಾಡಿದ ಅವರು, ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ನಾಡಿನ 33 ವಿವಿಧ ಮಠಾಧೀಶರು ಆಗಮಿಸಲಿದ್ದು, ಅವರಿಂದ ಧರ್ಮಸಭೆ ಹಾಗೂ ಉಪದೇಶಾಮೃತ ಜರುಗಲಿದೆ ಎಂದರು.
ಶ್ರೀಮಡಿವಾಳ ಶಿವಾಚಾರ್ಯ ಸೇವಾ ಸಮಿತಿ ಪದಾಧಿಕಾರಿಗಳು ಮಾತನಾಡಿ, ಮಡಿವಾಳ ಶಿವಾಚಾರ್ಯರ ೩೪ನೇ ವರ್ಷದ ಪುಣ್ಯಾರಾಧನೆ, ರೇವಣಸಿದ್ದ ಶಿವಾಚಾರ್ಯರ ವರ್ಧಂತೋತ್ಸವ ಹಾಗೂ ಅಭಿನವ ಮಡಿವಾಳ ಶಿವಾಚಾರ್ಯರ ನೂತನ ಪಟ್ಟಾಧಿಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನ. 25ರಂದು ಶಿವಾಚಾರ್ಯರಿಂದ ಧ್ವಜಾರೋಹಣ, 26ರಂದು ಬೆಳಗ್ಗೆ ಗುಗ್ಗಳ, 27ಕ್ಕೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ, 28ಕ್ಕೆ ತಾಲೂಕು ಅರ್ಚಕ ಮತ್ತು ಪುರೋಹಿತ ಸಂಘ ಮತ್ತು ಶ್ರೀಗುರು ಮಡಿವಾಳ ಶಿವಾಚಾರ್ಯ ಪೂಜಾ ಸಮಿತಿಯ ವೈದಿಕ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಲಿವೆ ಎಂದರು.ನ. 29ರಂದು ಕಿರಿಯ ಶ್ರೀಗಳಿಗೆ ಶ್ರೀರಂಭಾಪುರಿ ಜಗದ್ಗುರುಗಳು ಹಾಗೂ ಪಂಚಪೀಠಗಳ ಶಿವಾಚಾರ್ಯರಿಂದ ನೂತನ ಪಟ್ಟಾಧಿಕಾರದ ವಿಧಿ-ವಿಧಾನಗಳು ನೆರವೇರುವವು. ಸಂಜೆ 4ಕ್ಕೆ ಪೂರ್ಣಕುಂಭ ಭಜನೆ, ಡೊಳ್ಳು, ವೀರಗಾಸೆ ವಿವಿಧ ವಾದ್ಯಮೇಳಗಳಿಂದ ಮಡಿವಾಳ ಶಿವಾಚಾರ್ಯರ ಬೆಳ್ಳಿ ಮೂರ್ತಿಯ ಮೆರವಣಿಗೆ ಹಾಗೂ ನೂತನ ಪಟ್ಟಾಧ್ಯಕ್ಷರ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತರ ಸಹಯೋಗದೊಂದಿಗೆ ನೆರವೇರಲಿದೆ. ಬೀರವಳ್ಳಿ ವೀರೇಶ್ವರ ಪುಣ್ಯಾಶ್ರಮದ ಶಿವಕುಮಾರ ಶಾಸ್ತ್ರಿಗಳಿಂದ ನಿತ್ಯ ಸಂಜೆ ೬ಕ್ಕೆ ಜೀವನ ದರ್ಶನ ಪ್ರವಚನ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರು ಮಡಿವಾಳ ಶಿವಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ಸಿ.ಬಿ. ಹೊನ್ನಿಹಳ್ಳಿ, ಉಪಾಧ್ಯಕ್ಷ ಎಸ್.ವಿ. ತಡಸಮಠ, ಎಂ.ಆರ್. ತೋಟಗಂಟಿ, ವಿಜಯಕುಮಾರ ಹನ್ನೆರೆಡುಮಠ, ಜಿ.ಎನ್. ಘಾಳಿ, ಪರಮಾನಂದ ಒಡೆಯರ, ಶಿವಪುತ್ರಪ್ಪ ಸವಣೂರ, ಎಚ್.ಎನ್. ಸುಣಗದ, ಮಂಜುನಾಥ ವರದಾನಿ, ಬಸವರಾಜ ಹುಗ್ಗಿ, ಸಿದ್ದಯ್ಯ ಹಿರೇಮಠಪಾಟೀಲ್, ಚನ್ನಬಸಯ್ಯ ಚಿಕ್ಕಮಠ, ವೀರೇಶ ಹಾರೋಗೇರಿ, ಶೇಖರಯ್ಯ ಹಿರೇಮಠ ಇದ್ದರು.