ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲಾ ವರದಿಗಾರರು ಕೂಟದ 2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ದಿನಾಚರಣೆ-2024, ಮಾಧ್ಯಮ ಪ್ರಶಸ್ತಿ ಪ್ರಧಾನ ಹಾಗೂ ಜೀವಮಾನ ಸಾಧನೆಗಾಗಿ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಆ.31ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ್, ಬೆಳಗ್ಗೆ 11 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸಲಿದ್ದಾರೆ. ಕೂಟದ ನೂತನ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಅಧ್ಯಕ್ಷತೆ ವಹಿಸುವರು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೂಟದ ವೆಬ್‌ಸೈಟ್ ಉದ್ಘಾಟಿಸಲಿದ್ದಾರೆ. ಶಾಸಕರು, ಮಾಜಿ ಸಚಿವರೂ ಆದ ಡಾ.ಶಾಮನೂರು ಶಿವಶಂಕರಪ್ಪ ಹಿರಿಯ ಪತ್ರಕರ್ತರಿಗೆ ಕೂಟದಿಂದ ಗೌರವ ಸನ್ಮಾನ ಮಾಡುವರು. ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ, ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ, ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ನಿಕಟಪೂರ್ವ ಅಧ್ಯಕ್ಷ ಕೆ.ಏಕಾಂತಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ವರದಿಗಾರರ ಕೂಟದಿಂದ ಹಿರಿಯ ಹಾಗೂ ನಿವೃತ್ತ ಪತ್ರಕರ್ತರಿಗೆ ಗೌರವ ಸಮರ್ಪಿಸಲಾಗುತ್ತಿದೆ. ಕೂಟದಿಂದ ಕೂಟದ ಸದಸ್ಯರಿಗೆ ವಿಮೆ ಮಾಡಿಸುವ ಪ್ರಯತ್ನವೂ ಸಾಗಿದೆ ಎಂದು ಅವರು ಹೇಳಿದರು.
ಕೂಟದಿಂದ 2024ನೇ ಸಾಲಿನ ಮಾಧ್ಯಮ ಪ್ರಶಸ್ತಿಯನ್ನು 8 ಜನ ಪತ್ರಕರ್ತರಿಗೆ ಪತ್ರಕರ್ತರಿಗೆ ನೀಡಲಾಗುತ್ತಿದೆ. ವಿಜಯವಾಣಿ ಹಿರಿಯ ಉಪ ಸಂಪಾದಕ ಗಣೇಶ ಕಮಲಾಪುರ, ವಿಜಯ ಕರ್ನಾಟಕದ ವರದಿಗಾರ ವಿನಾಯಕ ನಾಯ್ಕ ಪೂಜಾರಿ, ಕನ್ನಡ ಭಾರತಿ ವರದಿಗಾರರಾದ ದೇವಿಕಾ ಸುನೀಲ್, ಪಬ್ಲಿಕ್ ಟಿವಿ ವರದಿಗಾರ ಕೆ.ಆರ್.ಪುನೀತ್ ಆಪ್ತಿ, ಒನ್ ಕನ್ನಡ ನ್ಯೂಸ್‌ನ ವೀಡಿಯೋ ಜರ್ನಲಿಸ್ಟ್ ಬಿ.ಹನುಮಂತರಾವ್, ದಾವಣಗೆರೆ ಶಿವ ದಿನಪತ್ರಿಕೆ ಸಂಪಾದಕ ಎಚ್.ನಿಂಗರಾಜ್, ಕನ್ನಡಪ್ರಭದ ವರದಿಗಾರ ಚನ್ನಬಸವ ಶೀಲವಂತ, ಕ್ರಾಂತಿಕೇಸರಿ ಪತ್ರಿಕೆ ವರದಿಗಾರರಾದ ಎ.ಬಿ. ರುದ್ರಮ್ಮ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.ಪತ್ರಿಕಾ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ 8 ಜನ ಹಿರಿಯರ ಸೇವೆಯನ್ನು ಗೌರವಿಸಿ, ಜೀವಮಾನ ಸಾಧನೆಗಾಗಿ ಗೌರವ ಸನ್ಮಾನ ಮಾಡಲಾಗುತ್ತಿದೆ. ಇಂದಿನ ಸುದ್ದಿ ಪತ್ರಿಕೆ ಸಂಪಾದಕ ವೀರಪ್ಪ ಎಂ.ಭಾವಿ, ಉದಯವಾಣಿ ನಿವೃತ್ತ ಮುಖ್ಯ ವರದಿಗಾರರಾದ ಎನ್.ಆರ್.ನಟರಾಜ, ಜನಮಿಡಿತ ಸಂಪಾದಕ ಜಿ.ಎಂ.ಆರ್.ಆರಾಧ್ಯ, ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ನಿವೃತ್ತ ಹಿರಿಯ ಪ್ರಧಾನ ವರದಿಗಾರ ಎಂ.ಶಶಿಕುಮಾರ, ದಿ ಟೈಮ್ಸ್ ಆಫ್ ಇಂಡಿಯಾದ ನಿವೃತ್ತ ವರದಿಗಾರರಾದ ಎಸ್.ಎ.ಗಂಗರಾಜ, ಮಲ್ನಾಡವಾಣಿ ಹಿರಿಯ ವರದಿಗಾರರಾದ ಐ.ಗುರುಶಾಂತಪ್ಪ ಹಾಗೂ ಬಸವರಾಜ ಐರಣಿ, ಜನತಾವಾಣಿ ನಿವೃತ್ತ ಹಿರಿಯ ವರದಿಗಾರರಾದ ಬಕ್ಕೇಶ ನಾಗನೂರು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಖಜಾಂಚಿ ಪವನಕುಮಾರ ಐರಣಿ, ಕಾರ್ಯದರ್ಶಿ ಬಿ.ಸಿಕಂದರ್, ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಎಸ್. ಲೋಕೇಶ ಇತರರು ಇದ್ದರು.