ಏ.23ಕ್ಕೆ ಬೆಂಗಳೂರು ಕರಗ

| Published : Feb 22 2024, 01:50 AM IST / Updated: Feb 22 2024, 12:29 PM IST

ಸಾರಾಂಶ

ಈ ಬಾರಿಯ ವಿಶ್ವವಿಖ್ಯಾತ ಬೆಂಗಳೂರು ಕರಗ ಚೈತ್ರ ಪೂರ್ಣಮಿಯಂದೇ ಜರುಗಲಿದ್ದು, ಏಪ್ರಿಲ್‌ 23ರಂದು ಉತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈ ಬಾರಿಯ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಏಪ್ರಿಲ್‌ 23ರ ಚೈತ್ರ ಪೌರ್ಣಮಿಯಂದು ಕರಗ ಉತ್ಸವ ನಡೆಯಲಿದೆ.

ಏಪ್ರಿಲ್‌ 15ರಂದು ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಏಪ್ರಿಲ್‌ 25ರ ವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಈ ಮೂಲಕ ಬರೋಬ್ಬರಿ 13ನೇ ಬಾರಿ ಕರಗ ಹೊರಲಿದ್ದಾರೆ.

ಕರಗ ಉತ್ಸವ ಸಂಬಂಧ ಸಭೆ ನಡೆಸಲಾಗಿದ್ದು, ಮುಜರಾಯಿ ಇಲಾಖೆ ಮತ್ತು ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯು ಕರಗ ಹೊರಲು ಜ್ಞಾನೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಿದೆ. 

ಕಳೆದ ವರ್ಷ ಕೆಲ ಕಿಡಿಗೇಡಿಗಳು ಎ.ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿ ಕರಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. 

ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಸತೀಶ್ ತಿಳಿಸಿದ್ದಾರೆ.