ಸಾರಾಂಶ
ಅಹಿಂದ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ । ಸರ್ಕಾರದ ದಲಿತ ವಿರೋಧಿ ನೀತಿಗೆ ಆಕ್ರೋಶ
ಕನ್ನಡಪ್ರಭ ವಾರ್ತೆ ರಾಮನಗರಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ 26 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ ಪ್ರತಿಭಟನಾ ಸಮಾವೇಶವನ್ನು ಆ.28 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಹರಿರಾಂ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ದಲಿತರ ಪರ ಎಂಬುದನ್ನು ಹೇಳಿ ವಂಚಿಸಿದೆ, ಮುಖ್ಯಮಂತ್ರಿ ಅವರು ದಲಿತ ಸಿದ್ದರಾಮಯ್ಯ ಎನ್ನುತ್ತಿದ್ದರು ಈಗ ಅಧಿಕಾರ ಸಿಕ್ಕ ಕೂಡಲೇ ದಲಿತ ವಿರೋಧಿಯಾಗಿದ್ದಾರೆ, ಇದನ್ನು ವಿರೋಧಿಸಿ ಅಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಅಹಿಂದ (ಶೇ.67ರಷ್ಟು ದಲಿತರು ,95ರಷ್ಟು ಮುಸ್ಲಿಮರು) ವರ್ಗದ ಜನರು ಮತ ನೀಡಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆಯಲು ಕಾರಣರಾದರು. ಗೆದ್ದ ಬಳಿಕ ಒಂದು ವರ್ಷ ಸಮಯ ಕೊಟ್ಟಿದ್ದೇವೆ. ಆದರೂ ಯಾವುದೇ ಯೋಜನೆ ತರಲಿಲ್ಲ. ಇರುವ ಯೋಜನೆಗಳನ್ನು ನಾಶ ಮಾಡುವ, ಕಡಿತ ಮಾಡುವ ಕೆಲಸ ಮಾಡಿದ್ದಾರೆ. ಸುಮಾರು 25ಸಾವಿರ ಕೋಟಿ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು, ದಲಿತರ ಹಣ ಕದ್ದಿದ್ದಾರೆ ಎಂದು ಆರೋಪಿಸಿದರು.ಸಂವಿಧಾನ ಪರ, ಸಂವಿಧಾನ ರಕ್ಷಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಯಾವ ಆಶಯವನ್ನು ಪಾಲಿಸುತ್ತಿಲ್ಲ, ಬದಲಿಗೆ ಈ ದೇಶದ ಕಟ್ಟಕಡೆಯ ಸಮುದಾಯವಾದ ದಲಿತರಿಗೆ ಸೌಲಭ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದರು.ಸಿದ್ದರಾಮಯ್ಯ ಅವರ ಮೇಲೆ ಮೊದಲಿಗೆ ನಂಬಿಕೆ ಇತ್ತು. ಆದರೆ ಅವರು ದಲಿತರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದರು. ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಟ್ರಾಸಿಟಿ ಪ್ರಕರಣಗಳು ದಾಖಲಾಗುತ್ತಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಷೇತ್ರದಲ್ಲಿ ದಲಿತರ ಕೈ ಕತ್ತರಿಸಲಾಯಿತು. ಮೊನ್ನೆಯಷ್ಟೇ ಕ್ಷೌರಿಕನೊಬ್ಬ ದಲಿತನಿಗೆ ಕ್ಷೌರ ಮಾಡುವ ವಿಚಾರಕ್ಕಾಗಿ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ರಾಜ್ಯದಲ್ಲಿ ಅನ್ಯಾಯದ ವಿರುದ್ಧ ಸಮಯಕ್ಕೆ ಸರಿಯಾಗಿ ಎಫ್.ಐ.ಆರ್ ದಾಖಲಾಗುತ್ತಿಲ್ಲ. ದಲಿತರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಿದ್ದಾಪುರ ಮಂಜುನಾಥ್, ಶಂಕರ್ ರಾಮಲಿಂಗಯ್ಯ, ಪದ್ಮಾವತಿ ಇದ್ದರು.‘ಕಾಂಗ್ರೆಸ್ ಆಡಳಿತ ವಿರುದ್ಧ ಪ್ರತಿಭಟಿಸುವ ನಡೆಯೇ ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ ಎಂಬ ಸಮಾವೇಶದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇದರ ಬಗ್ಗೆ ಭೇಟಿಗೆಂದು ಕಳೆದು ಆರು ತಿಂಗಳಿಂದಲೂ ಸಮಯ ಕೇಳಿದರೂ ನೀಡಿಲ್ಲ, ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗೆ ‘ಪ್ರಬುದ್ಧ ಯೋಜನೆ’ ರದ್ದು ಮಾಡಿರುವುದು, ಒಳ ಮೀಸಲಾತಿ ಜಾರಿ ತರುವುದಕ್ಕೂ ಹಿಂದುಮುಂದು ನೋಡುತ್ತಿರುವುದು ಸೇರಿದಂತೆ ಒಟ್ಟು ಒಂಭತ್ತು ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.
- ಹರಿರಾಂ, ಮುಖಂಡರು, ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ.