ಸಾರಾಂಶ
ಬೆಂಗಳೂರು : ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಬೀದಿ ನಾಯಿಗಳನ್ನು ಸ್ಥಳಾಂತರಿಸಿ ಪ್ರತ್ಯೇಕ ನೆಲೆ ಕಲ್ಪಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರೂ ಪ್ರತಿಕ್ರಿಯೆ ನೀಡಿದ್ದಾರೆ. ಬೀದಿ ನಾಯಿಗಳನ್ನು ದತ್ತುಪಡೆಯೋಣ ಎಂದಿದ್ದಾರೆ.
ನಟ ಕಿಚ್ಚ ಸುದೀಪ್, ‘ಬೀದಿ ನಾಯಿಗಳ ಸ್ಥಳಾಂತರದ ಬಗೆಗಿನ ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆ ತೀರ್ಪಿಗೆ ಅದರದ್ದೇ ಆದ ಕಾರಣಗಳಿರಬಹುದು. ಆದರೆ ಈ ಸ್ಥಳಾಂತರ ನಾಯಿಗಳ ಆರೋಗ್ಯ, ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆಯೂ ಚಿಂತಿಸಬೇಕಿದೆ. ಬೀದಿಗಳಲ್ಲಿ ಬೆಳೆದ ನಾಯಿಗಳನ್ನು ಕೂಡಿ ಹಾಕುವುದರಿಂದ ಅವುಗಳ ಸ್ವಾತಂತ್ರ್ಯ ಕಸಿದುಕೊಂಡಂತಾಗುತ್ತದೆ’ ಎಂದಿದ್ದಾರೆ.
‘ಬೀದಿನಾಯಿಗಳು ಸರ್ವೇ ಸಾಮಾನ್ಯವಾಗಿದ್ದ ಪರಿಸರದಲ್ಲಿ ಬೆಳೆದವನು ನಾನು. ನಮ್ಮ ಕುಟುಂಬದಲ್ಲೂ ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದೇವೆ. ನಾಯಿಗಳ ಪ್ರೀತಿ, ನಿಷ್ಠೆ ದೊಡ್ಡದು. ಆ ಪ್ರೀತಿಯ ಜೀವಿಗಳು ಬೀದಿಯಲ್ಲಿ ಬೆಳೆಯಬೇಕಿಲ್ಲ. ಮನಸ್ಸು ಮಾಡಿದರೆ ನಾವು ಅವುಗಳಿಗೆ ನಮ್ಮ ಮನೆಯಲ್ಲೇ ನೆಲೆ ಒದಗಿಸಬಹುದು. ಧ್ವನಿ ಇಲ್ಲದ ಆ ಮೂಕ ಜೀವಿಗಳಿಗೆ ನಾವೇ ದನಿಯಾಗೋಣ. ಬೀದಿ ನಾಯಿಗಳನ್ನು ದತ್ತು ಪಡೆಯೋಣ’ ಎಂದು ಹೇಳಿದ್ದಾರೆ.
ರಾಜ್ ಬಿ.ಶೆಟ್ಟಿ, ‘ಪ್ರತೀ ಜೀವಿಗೂ ಬದುಕಿನ ಹಕ್ಕಿದೆ. ನಾನು 7 ಬೀದಿ ನಾಯಿಗಳನ್ನು ಸಾಕುತ್ತಿದ್ದೇನೆ. ನಾವೆಲ್ಲರೂ ಬೀದಿ ನಾಯಿಗಳನ್ನು ದತ್ತು ಪಡೆಯೋಣ’ ಎಂದಿದ್ದಾರೆ.
ನಟಿ ರಮ್ಯಾ ಗಾಂಧೀಜಿ ಅವರ, ‘ಯಾವುದೇ ದೇಶದ ನಾಗರಿಕರು ಎಂಥವರು ಎಂಬುದನ್ನು, ಅವರು ಪ್ರಾಣಿಗಳನ್ನು ನೋಡಿಕೊಳ್ಳುವ ಬಗೆಯಿಂದ ನಿರ್ಧರಿಸಬಹುದು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ನಟಿ ನಿಶ್ವಿಕಾ ನಾಯ್ಡು ಸಹ ಬೀದಿ ನಾಯಿಗಳ ಪರ ದನಿ ಎತ್ತಿದ್ದಾರೆ.