24ರಂದು ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ 76ನೇ ಹುಟ್ಟುಹಬ್ಬ ಸಂಭ್ರಮ

| Published : Feb 19 2025, 12:47 AM IST

ಸಾರಾಂಶ

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ 76ನೇ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಫೆ.24ರಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಅಭಿವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುತ್ತಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ 76ನೇ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಫೆ.24ರಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಅಭಿವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿವಂದನಾ ಸಮಿತಿ ಆಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಅಭಿವಂದನಾ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ನಡೆಯಲಿದೆ ಎಂದರು.

ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ 76ನೇ ಹುಟ್ಟುಹಬ್ಬವನ್ನು ವೈಭವದಿಂದ ನೆಹರೂ ಮೈದಾನದಲ್ಲಿ ಆಚರಿಸುವ ಉದ್ದೇಶ ಹೊಂದಿದ್ದೆವು. ಆದರೆ ಡಾ.ಎಂಎನ್‌ಆರ್‌ ಅವರು ಸರಳವಾಗಿ ಹುಟ್ಟುಹಬ್ಬ ಆಚರಿಸುವುದಾಗಿ ಹೇಳಿರುವುದರಿಂದ ಜಿಲ್ಲಾ ಸಹಕಾರಿ ಬ್ಯಾಂಕ್‌ ಸಭಾಂಗಣದಲ್ಲೇ ಅರ್ಥಪೂರ್ಣವಾಗಿ ಏರ್ಪಡಿಸಲಾಗಿದೆ ಎಂದು ದೇವಿಪ್ರಸಾದ್‌ ಶೆಟ್ಟಿ ಹೇಳಿದರು.

ಸರ್ವ ಧರ್ಮೀಯ ಫಲಾನುಭವಿಗಳು:

ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುವ ಚಿಂತನೆಯೊಂದಿಗೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿರುವ ಡಾ.ಎಂಎನ್‌ ರಾಜೇಂದ್ರ ಕುಮಾರ್‌ ಅವರು ಸಹಕಾರಿಗಳೆಲ್ಲರಿಗೆ ಆದರ್ಶ. ಅವರ ಹುಟ್ಟುಹಬ್ಬದ ಪ್ರಯುಕ್ತ 76 ಮಂದಿ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಲಿದೆ. ಸಹಕಾರ ಕ್ಷೇತ್ರವು ಸರ್ವ ಧರ್ಮೀಯರ ಕ್ಷೇತ್ರವಾಗಿರುವುದರಿಂದ ಸಮಾಜದ ಎಲ್ಲ ವರ್ಗದ ಫಲಾನುಭವಿಗಳನ್ನು ಗುರುತಿಸಿ ಸವಲತ್ತು ವಿತರಿಸಲಾಗುವುದು ಎಂದರು.

ಉದ್ಘಾಟನೆಗೆ ಗಣ್ಯರು:

ಅಭಿವಂದನಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಫರೀದ್‌ ನೆರವೇರಿಸಲಿದ್ದಾರೆ. ಸಮಸ್ತ ಸಹಕಾರಿಗಳ ಪರವಾಗಿ ಡಾ.ಎಂಎನ್‌ಆರ್‌ ಅವರು ಅಭಿವಂದನೆ ಸ್ವೀಕರಿಸಲಿದ್ದು, ನಿಟ್ಟೆ ಸಂಸ್ಥೆಗಳ ಅಧ್ಯಕ್ಷ ಎನ್‌.ವಿನಯ ಹೆಗ್ಡೆ ಅವರು ಅಭಿವಂದಿಸುವರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿವಂದನಾ ಭಾಷಣ ಮಾಡಲಿದ್ದಾರೆ. 76 ಮಂದಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆಯನ್ನು ದ.ಕ ಸಂಸದ ಕ್ಯಾ. ಬ್ರಿಜೇಶ್‌ ಚೌಟ ನೆರವೇರಿಸಲಿದ್ದು, ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸುವರು ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಭಾಸ್ಕರ ಎಸ್‌.ಕೋಟ್ಯಾನ್‌, ಜಯರಾಜ್‌ ರೈ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು, ಉಡುಪಿ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಸಿಇಒ ಗೋಪಿನಾಥ ಭಟ್‌ ಇದ್ದರು.............ನವೋದಯಕ್ಕೆ 25ಸತತ 31 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವ ಡಾ|ಎಂಎನ್‌ಆರ್‌ ಅವರು ಗ್ರಾಮೀಣ ಮಹಿಳೆಯರನ್ನು ಸಶಕ್ತರನ್ನಾಗಿ ಮಾಡುವ ಉದ್ದೇಶದಿಂದ ನವೋದಯ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಿದರು. 8 ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗಿದ್ದು 35 ಸಾವಿರ ಸಂಘಗಳಿವೆ, 3.5 ಲಕ್ಷ ಸದಸ್ಯರಿದ್ದಾರೆ, ಈ ಮೂಲಕ ಮುಖ್ಯವಾಗಿ ಮಹಿಳೆಯರಿಗೆ ಸ್ವಾವಲಂಬಿ ಜೀವನ ಸಾಧ್ಯವಾಗಿದೆ, ಈಗ ನವೋದಯ ಸಂಘಗಳ ಸ್ಥಾಪನೆಯ 25ನೇ ವರ್ಷವೂ ಆಗಿದೆ ಎಂದು ಬೆಳಪು ದೇವಿಪ್ರಸಾದ್‌ ಶೆಟ್ಟಿವಿವರಿಸಿದರು.