ಫೆ.23, 24ರಂದು ಐತಿಹಾಸಿಕ ದಂಡಿನ ಮಾರಮ್ಮ, ಸಿಡಿಹಬ್ಬ ಆಚರಣೆ

| Published : Feb 07 2024, 01:47 AM IST

ಸಾರಾಂಶ

ಮಳವಳ್ಳಿ ಪಟ್ಟಣದ ರಸ್ತೆಗಳ ಅಭಿವೃದ್ದಿಗೆ ಶಾಸಕರು ಈಗಾಗಲೇ ಸುಮಾರು 1 ಕೋಟಿ ರು. ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದಾರೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ. ಹಬ್ಬಕ್ಕೆ ಸ್ವಚ್ಛತೆ, ವಿದ್ಯುತ್ ಸೇರಿದಂತೆ ಆಗತ್ಯ ಮೂಲ ಸೌಲಭ್ಯ ಕಲ್ಪಿಸಲು ಆಗತ್ಯಕ್ರಮ ಕೈಗೊಳ್ಳಲಾಗಿದೆ. ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬವನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಂದು ಸಮುದಾಯದ ಜನರು ಸಹಕಾರ ಬೇಕಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿಪಟ್ಟಣದಲ್ಲಿ ಫೆ.23 ಮತ್ತು 24ರಂದು ನಡೆಯಲಿರುವ ಐತಿಹಾಸಿಕ ಸಿಡಿಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಸಮುದಾಯ ಮುಖಂಡರ ಪೂವ೯ಭಾವಿ ಸಭೆ ನಡೆಯಿತು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಉಪವಿಭಾಗ ಅಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮುದಾಯಗಳ ಹಲವು ಮುಖಂಡರು ಹಬ್ಬ ಆಚರಣೆ ಕುರಿತು ಹಲವು ಸಲಹೆ ನೀಡಿದರು.

ಎಸಿ ಶಿವಮೂರ್ತಿ ಮಾತನಾಡಿ, ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬವನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಪ್ರತಿಯೊಂದು ಸಮುದಾಯದ ಜನರು ಸಹಕಾರ ಬೇಕಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಗಂಗಾಮತ ಬೀದಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯೂ ಅಪೂರ್ಣಗೊಂಡಿದೆ. ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ. ಆದರೆ, ಕಾಮಗಾರಿ ಮುಂದುವರಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಹಬ್ಬದ ಅಂಗವಾಗಿ ಕಾಮಗಾರಿ ಹಮ್ಮಿಕೊಳ್ಳಲು 2 ತಿಂಗಳು ಮುಂಚಿತವಾಗಿ ಸಭೆ ಕರೆದು ಸಮಸ್ಯೆಗಳ ನಿವಾರಿಸಬೇಕು. ಹಬ್ಬದ ವೇಳೆ ಮನೆಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ದಿನಕ್ಕೆ 2 ಬಾರಿ ನೀರು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದರು.

ಪಟ್ಟಣದವನ್ನು ಸ್ವಚ್ಛಗೊಳಿಸಬೇಕು. 24-7 ನೀರಿನ ಪೈಪ್‌ಗಳು ತುಕ್ಕು ಹಿಡಿದಿವೆ. ಇದರಿಂದ ಬರುವ ನೀರನ್ನು ಸೋಸಿ ಕುಡಿಯವ ಅನಿವಾರ್ಯತೆ ಎದುರಾಗಿದೆ. ಕೂಡಲೇ ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಪಡಿತರ ಅಕ್ಕಿ ಕೊಡಿಸುವ ಜೊತೆಗೆ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಕಿರಣ್‌ಶಂಕರ್ ಮಾತನಾಡಿ, ತುಕ್ಕು ಹಿಡಿಯುತ್ತಿರುವ ನೀರಿನ ಪೈಪ್ ಹಾಗೂ ಮೀಟರ್‌ಗಳನ್ನು ತೆರವುಗೊಳಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು, ತೆರೆದಿರುವ ಮ್ಯಾನ್‌ವೋಲ್‌ಗಳನ್ನು ಸರಿಪಡಿಸಬೇಕೆಂದು ತಿಳಿಸಿದರು.

ಮುಖಂಡ ಸಿಕ್ರೇಶ್ ಮಾತನಾಡಿ, ಕೀರ್ತಿನಗರದಿಂದ ಘಟ್ಟ ತರುವ ವೇಳೆ ಕಿರಿದಾದ ರಸ್ತೆಗಳಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ವಾಹನಗಳನ್ನು ತೆರವುಗೊಳಿಸಿ ಶಿಥಿಲಗೊಂಡಿರುವ ರಸ್ತೆಯನ್ನು ಸರಿಪಡಿಸಬೇಕೆಂದು ಕೋರಿದರು.

ಸಿದ್ಧಾರ್ಥನಗರ ಮುಖಂಡ ಬಾಲರಾಜ್ ಮಾತನಾಡಿ, ಪಟ್ಟಲದಮ್ಮ ದೇವಸ್ಥಾನಕ್ಕೆ ಅಡ್ಡಲಾಗಿ ಕಟ್ಟಿರುವ ಕಾಂಪೌಂಡ್‌ ತೆರವುಗೊಳಿಸಲು ಮುಂದಾಗಬೇಕು ಎಂದರು.

ಬಸವಲಿಂಗಪ್ಪ ನಗರದ ಮಂಜು ಮಾತನಾಡಿ, ಪಟ್ಟಣವನ್ನು ಸ್ವಚ್ಚಗೊಳಿಸಿ ಸುಂದರಗೊಳಿಸುವ ನಮಗೆ ಘಟ್ಟ ಮೆರವಣಿಗೆ ತಡವಾಗಿ ಬರುತ್ತಿದೆ. ಸೂರ್ಯೋದಯ ಮುಂಚಿತವಾಗಿ ನಡೆಸಬೇಕು ಎಂದು ಕೋರಿದರು.

ಸಿದ್ಧಾರ್ಥ ನಗರದ ಮುಖಂಡ ನಾಗರಾಜು, ಪಟೇಲ್ ಚಿನ್ನೇಗೌಡರ ಮೊಮ್ಮಗ ಕಿರಣ್‌ಕುಮಾರ್, ಯಜಮಾನ ವೀರೇಗೌಡ ಮಾತನಾಡಿ, ಯಾವುದೇ ವಿವಾದವನ್ನು ಮಾತುಕತೆ ಮೂಲಕ ಮಾತಕತೆ ಮೂಲಕ ಹಬ್ಬವನ್ನು ಶಾತಿಯುತವಾಗಿ ಆಚರಿಸಲು ಅಧಿಕಾರಿಗಳು ಶಾಸಕರು ಗಮನ ಹರಿಸಬೇಕು ಎಂದರು.

ಮುಖಂಡ ಚಿಕ್ಕಮೊಗಣ್ಣ ಮಾತನಾಡಿ, ಸ್ಥಳೀಯ ಪೊಲೀಸರನ್ನು ಸಿಡಿರಣ ಎಳೆಯುವ ವೇಳೆ ದುಡಿಯುವ ಯುವಕರಿಗೆ ನೇರವಾಗಿ ದೇವರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಸರ್ಕಲ್ ಇನ್ಸ್ ಪೆಕ್ಟರ್ ರವಿಕುಮಾರ್ ಮಾತನಾಡಿ, ಶಾಂತಿಯುತ ಸಿಡಿಹಬ್ಬಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಘಟ್ಟ ಮೆರವಣಿಗೆ ಸಮಯ ಅನುಸಾರವಾಗಿ ನಡೆಯಬೇಕು. ಫ್ಲೆಕ್ಸ್ ಹಾಕಲು ಪುರಸಭೆಯಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕವನ್ನು ಬೆಳಗೆ 6ರಿಂದ ಸಂಜೆ ೧೦ಗಂಟೆಯೊಳಗೆ ಮಾತ್ರ ಹಾಕಬೇಕು ಎಂದರು.

ನಂತರ ಎಸಿ ಶಿವಮೂರ್ತಿ ಮಾತನಾಡಿ, ಪಟ್ಟಣದ ರಸ್ತೆಗಳ ಅಭಿವೃದ್ದಿಗೆ ಶಾಸಕರು ಈಗಾಗಲೇ ಸುಮಾರು 1 ಕೋಟಿ ರು ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದಾರೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ. ಹಬ್ಬಕ್ಕೆ ಸ್ವಚ್ಛತೆ, ವಿದ್ಯುತ್ ಸೇರಿದಂತೆ ಆಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಲೋಕೇಶ್, ಡಿವೈಎಸ್ಪಿ ಕೃಷ್ಣಪ್ಪ, ತಾಪಂ ಇಒ ಮಮತ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಬಿಇಒ ಚಂದ್ರಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಸೇರಿದಂತೆ ಇತರರು ಇದ್ದರು.