ಸಾರಾಂಶ
ಫೆ.4ರಂದು ಬಸವನಬಾಗೇವಾಡಿಯಲ್ಲಿ ಸಾವಿರಾರು ಸ್ವಾಮೀಜಿಗಳ ನೇತೃತ್ವದಲ್ಲಿ ‘ಕ್ರಾಂತಿವೀರ ಬ್ರಿಗೇಡ್’ಗೆ ಚಾಲನೆ ನೀಡಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗ: ಫೆ.4ರಂದು ಬಸವನಬಾಗೇವಾಡಿಯಲ್ಲಿ ಸಾವಿರಾರು ಸ್ವಾಮೀಜಿಗಳ ನೇತೃತ್ವದಲ್ಲಿ ‘ಕ್ರಾಂತಿವೀರ ಬ್ರಿಗೇಡ್’ಗೆ ಚಾಲನೆ ನೀಡಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಾಂತಿವೀರ ಬ್ರಿಗೇಡ್ ಎನ್ನುವುದು ಪಕ್ಷಾತೀತವಾಗಿದೆ. ಹಿಂದೂ ಸಮಾಜದ ಒಗ್ಗೂಡುವಿಕೆಗಾಗಿ ಇದನ್ನು ಸ್ಥಾಪಿಸಲಾಗುತ್ತಿದೆ. ಬಸವಣ್ಣ ಹುಟ್ಟಿದ ನಾಡಾದ ಬಸವನ ಬಾಗೇವಾಡಿಯಿಂದಲೇ ಇದಕ್ಕೆ ಚಾಲನೆ ಸಿಗಲಿದೆ.
ಉತ್ತರ ಕರ್ನಾಟಕದಿಂದ ವಿವಿಧ ಮಠಗಳ 1008 ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಶಿವಮೊಗ್ಗದಿಂದಲೂ ಕೂಡ ಸುಮಾರು 250ಕ್ಕೂ ಅಧಿಕ ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.ರಾಜ್ಯದಲ್ಲಿ ಹಿಂದೂ ಸಮಾಜದ ವಿವಿಧ ಜಾತಿಯ ಮಠಾಧೀಶರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಆ ಪೈಕಿ ಬ್ರಿಗೇಡ್ ನ ಉದ್ಘಾಟನಾ ಸಮಾರಂಭಕ್ಕೆ 1008 ಸ್ವಾಮೀಜಿಗಳನ್ನು ಒಟ್ಟಿಗೆ ಸೇರಿಸಿ ಅವರ ಪಾದ ಪೂಜೆ ಮಾಡುವ ಮೂಲಕ ಬ್ರಿಗೇಡ್ ಉದ್ಘಾಟನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದ ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬರಿಗೆ ಒಬ್ಬರು ಟೀಕೆ ಮಾಡುವುದು ರಾಜಕಾರಣದಲ್ಲಿ ತಪ್ಪಲ್ಲ. ಆದರೆ ನಾವು ದ್ವೇಷ ಮಾಡಿಲ್ಲ. ಸ್ನೇಹದಿಂದಲೇ ರಾಜಕಾರಣ ಮಾಡಿದ್ದೇವೆ. ಗೆಲುವು ಸೋಲು ರಾಜಕಾರಣದಲ್ಲಿ ಇದ್ದಿದ್ದೇ, ಯಾರೂ ಕೂಡ ಸಿದ್ಧಾಂತ ಬಿಡುವ ಪ್ರಶ್ನೆ ಬರುವುದಿಲ್ಲ. ಆದರೆ ಆ ಬಡವರು 7 ವರ್ಷ ಆಗಿದೆ ಹಣ ನೀಡಿ, ಕೊಟ್ಟಿರುವ ಹಣವನ್ನದರೂ ವಾಪಾಸ್ ಕೊಡಿ ಎನ್ನುವ ನಿಟ್ಟಿನಲ್ಲಿ ಕೆಲವರು ಇದ್ದಾರೆ. ರೆಡಿಯಾಗಿರುವ ಮನೆಯನ್ನಾದರೂ ಅವರಿಗೆ ಕೊಡಿ ಎನ್ನುವಂತೆ ಶಾಸಕರು ಹೇಳಿದ್ದಾರೆ,
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಂತರ ಕೊಡುವ ಯೋಚನೆಯಲ್ಲಿರುವ ಸಚಿವರ ಯೊಚನೆ ಇದೆ, ಇಬ್ಬರದೂ ಸರಿ ಇದೆ ಎಂದರು.ಆದರೆ, ಅಲ್ಲಿ ಸಜ್ಜನರು ವಾಸಿಸುವ ಮನೆಯಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ ಒಂದು ಟೈಮ್ ಬಾಂಡ್ ಇಟ್ಟುಕೊಂಡು, ಒಂದು ಅಥವಾ ಎರಡು ತಿಂಗಳಿನಲ್ಲಿ ಬಡವರಿಗೆ ನೀಡುವ ವ್ಯವಸ್ಥೆ ಮಾಡಿ. ಇಲ್ಲದಿದ್ದಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಸಚಿವರಿಗೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ಇ.ವಿಶ್ವಾಸ್, ಕಾಚನಕಟ್ಟೆ ಸತ್ಯನಾರಾಯಣ್, ಬಾಲು, ಟಾಕ್ರಾನಾಯ್ಕ್, ಮಂಜು, ಕುಬೇರ, ಜಾಧವ್, ಶಿವಾಜಿ, ಮೋಹನ್, ಕುಬೇರಪ್ಪ ಇದ್ದರು.
ಖರ್ಗೆ 2 ವರ್ಷದ ಹುಡುಗನ ರೀತಿ ಆಡುತ್ತಿದ್ದಾರೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಯಸ್ಸು 80 ದಾಟಿದೆ. ಆದರೆ 2 ವರ್ಷದ ಹುಡುಗನ ರೀತಿ ಆಡುತ್ತಿದ್ದಾರೆ. ಹಿಂದೂ ಸಮಾಜದ ಮೇಲೆ ಯಾಕೆ ನಿಮಗೆ ಚಿಂತೆ, ಈ ಸಮಾಜದಲ್ಲಿ ಪುಣ್ಯ ಕ್ಷೇತ್ರದ ಬಗ್ಗೆ, ಹಸು ಬಗ್ಗೆ, ನದಿ ಬಗ್ಗೆ ಹಗುರವಾಗಿ ಮಾತನಾಡುವ ಅನೇಕರು ಕಾಂಗ್ರೆಸ್‌ನಲ್ಲಿದ್ದಾರೆ. ಇವರಿಗೆ ಏನು ರೋಗ ಬಂದಿದ್ಯಾ ? ತಾಕತ್ತು ಇದ್ದರೆ ಮೆಕ್ಕಾ ಮದೀನಾ ಮತ್ತು ಜೆರುಸಲೇಮ್‌ಗೆ ಹೋಗಿ ಬರ್ತಾರಲ್ಲ ಅವರ ಬಗ್ಗೆ ಮಾತನಾಡಲಿ. ಮೋದಿ ಬಗ್ಗೆ ಅಮಿತ್ ಶಾ ಬಗ್ಗೆ ಟೀಕೆ ಮಾಡಲು ನೀವು ಯಾರು, ಇಡೀ ಹಿಂದೂ ಸಮಾಜದ ಬಗ್ಗೆ, ನಮ್ಮ ತೀರ್ಥ ಕ್ಷೇತ್ರದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಸಿದ್ಧಾಂತದ ರಾಜಕಾರಣ ಮತ್ತೆ ಬರುತ್ತದೆ ಎಂಬ ನಂಬಿಕೆ ಇದೆ
ಇದೂವರೆಗೂ ಚುನಾವಣೆ ನಡೆಸಿಕೊಂಡು ಬರುತ್ತಿರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ರಾಜ್ಯದ ರಾಜಕಾರಣವೇ ಕುಲಗೆಟ್ಟು ಹೋಗಿದೆ. ನಮ್ಮ ಪಕ್ಷ ಹೀಗಾಗಿದೆಯಲಾ ಎಂದು ತುಂಬಾ ನೋವಿದೆ ? ಜನರ ನೋವು ಬಲಿದಾನ ಆಗಿದೆ ಪಕ್ಷ ಕಟ್ಟುವಲ್ಲಿ. ಅವರೆಲ್ಲರ ತಪಸ್ಸು ಅವರೆಲ್ಲರ ಬಲಿದಾನದ ಪಕ್ಷ ಕೆಲವು ರಾಜಕಾರಣಿಗಳ ಕೈಗೆ ಸಿಕ್ಕಿದೆ. ಸಿದ್ಧಾಂತದ ರಾಜಕಾರಣ ಮತ್ತೆ ಬರುತ್ತದೆ ಎಂಬ ನಂಬಿಕೆ ಇದೆ. ಪಕ್ಷ ಶುದ್ಧೀಕರಣ ಆಗಬೇಕಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯದವರು ಬರುತ್ತಿದ್ದಾರೆ. ಬಿಜೆಪಿ ಶುದ್ಧೀಕರಣ ಆಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಹಸುವಿನ ಬಾಲ ಕಟ್ ಮಾಡಿದವರನ್ನು ಬಂಧಿಸಿ
ಕೋಟಾ ಗ್ರಾಮದಲ್ಲಿ ಹಸುವಿನ ಬಾಲ ಕಟ್ ಮಾಡಿದ್ದಾರೆ. ಅವರು ಮನುಷ್ಯರಿಗೆ ಹುಟ್ಟಿದ್ದಾರೋ ಅಥವಾ ದನಕ್ಕೆ ಹುಟ್ಟಿದ್ದಾರೋ ಗೊತ್ತಿಲ್ಲ. ನನ್ನ ಕೈಗೆ ಸಿಕ್ರೆ ಅವರ ಕೈ ಕಾಲು ಕಟ್ ಮಾಡುತ್ತೇನೆ. ಹಿಂದೂಗಳ ತಾಳ್ಮೆ ನೀತಿ ಸಂಹಿತೆ ಕಾಯ್ತಿದೆ. ನಿಮ್ಮ ತಾಯಿ ಕೆಚ್ಚಲು ಕಡಿದ್ರೆ ಸುಮ್ಮನೆ ಇರ್ತೀರಾ ? ಪೊಲೀಸ್ ಇಲಾಖೆ ಬೆನ್ನತ್ತಿ ಇವರನ್ನ ಬಂಧಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.